Sunday, June 14, 2015

ಕೃತಜ್ಞತೆ(Gratitude)

ನಾನು ಎಂದೂ ದೊಡ್ಡ ದೊಡ್ಡ ದಾನ, ಧರ್ಮ ಮಾಡುವುದಿಲ್ಲ. ಪಾಪ, ಪುಣ್ಯಗಳ ಹಂಗಿಲ್ಲದೆ ಕೈಲಾದಷ್ಟು, ಸಣ್ಣ ಪುಟ್ಟ 'ನಿಜವಾದ ಅವಶ್ಯಕತೆ ಇದ್ದವರಿಗೆ ಮಾತ್ರ' ಹಣ ಸಹಾಯ ಮಾಡುವ ಅಭ್ಯಾಸವಿದೆ. ಹಾಗೆ ಸಹಾಯಮಾಡಿ ನೋಡಿ. ನಾವು ದಾನ ಮಾಡಿದ ದುಡ್ಡಿಗಿಂತ ಹತ್ತು ಪಾಲು ಖುಷಿ ನಮಗೆ ಸಿಕ್ಕಿರುತ್ತದೆ. ಬಲಗೈ ಕೊಟ್ಟದ್ದು ಎಡಗೈಗೂ ಗೊತ್ತಾಗಬಾರದು ಎಂದು ಹೇಳುತ್ತಾರೆ. ನಾನು ಮಾಡಿದ್ದನ್ನು ಹೇಳಿಕೊಳ್ಳಬೇಕೆಂದಲ್ಲ . ಆದರೆ ಕೆಲವರ ಸ್ವಭಾವ ಎಷ್ಟು ಘನತೆಯಿಂದ ಕೂಡಿರುತ್ತದೆ ಎಂಬುದಕ್ಕೆ ನಿದರ್ಶನ ಕೊಡಲು ಇದನ್ನು ಬರೆಯುತ್ತಿದ್ದೇನೆ.ನಮ್ಮ ಆಫೀಸ್ ನಲ್ಲಿ ಒಬ್ಬರು ಮುಸ್ಲಿಂ ಹೆಂಗಸು ಹೊಸದಾಗಿ ಕೆಲಸಕ್ಕೆ ಸೇರಿದ್ದಾರೆ. ಹೆಸರು ಶಂಶಾದ್ ಬಾನು. ಈಕೆ ಅಕೌಂಟೆಂಟ್. ಸಾಮಾನ್ಯವಾಗಿ ಮುಸ್ಲಿಂ ಆಗಿ ಬುರ್ಖಾ ಹಾಕದ ಹೆಂಗಸರನ್ನು ನಾನು ನೋಡಿದ್ದು ತೀರಾ ಕಡಿಮೆ. ಈಕೆ ಅವರೊಳಗೆ ಒಬ್ಬರು. ಒಳ್ಳೊಳ್ಳೆ, ಚಂದದ ಸೀರೆ ಉಟ್ಟು ಲಕ್ಷಣವಾಗಿ ಬರುತ್ತಾರೆ. ಸಂಕೋಚ ಸ್ವಭಾವದ, ಕ್ಲೀನಾಗಿರುವ, ಎಷ್ಟೋ ವರ್ಷಗಳಿಂದ ತನ್ನ ಪಾಡಿಗೆ ತಾನು ಅಚ್ಚುಕಟ್ಟಾಗಿ ಕೆಲಸಮಾಡಿಕೊಂಡು ಹೋಗುವ ,ಮಿತಭಾಷಿ. ಈಕೆ ನನ್ನ ಫೇವರಿಟ್. ಸಮಯ ಸಿಕ್ಕಾಗಲೆಲ್ಲ ಅವರ ಬಳಿ ಮಾತಾಡುತ್ತಿರುತ್ತೇನೆ. ಈಕೆಗೆ ಒಬ್ಬ ಮಗ, ಮಗಳು. ಮಗ ಗಾರೇಜ್ ನಲ್ಲಿ ಕೆಲಸ ಮಾಡುತ್ತಾನೆ. ಮಗಳು ತುಂಬಾ ಬುದ್ಧಿವಂತೆ. ಈಗಷ್ಟೇ ಬಿ. ಕಾಮ್ ಫೈನಲ್ ಇಯರ್ ಮುಗಿಸಿದ್ದಾಳೆ. ಹೋದ ವರ್ಷ ಈ ಹುಡುಗಿ ೨ನೇ PUC ಯಲ್ಲಿ, ಟ್ಯೂಷನ್ ಇಲ್ಲದೆಯೇ, ಯಾವುದೋ ಪುಟ್ಟದೊಂದು ಕಾಲೇಜ್ ನಲ್ಲಿ ಓದಿ 89% ಮಾರ್ಕ್ಸ್ ತೆಗೆದಿದ್ದಳು. ಈ ಹುಡುಗಿ ಹಗಲೂ-ರಾತ್ರಿ, ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಓದುವುದಿಲ್ಲ. ದಿನಕ್ಕೆ ಹೆಚ್ಚೆಂದರೆ 2 ತಾಸು ಓದುತ್ತಾಳಂತೆ ಅಷ್ಟೇ. "ಇನ್ನೊಂದು ಗಂಟೆ ಹೆಚ್ಚು ಓದಿದ್ದರೂ 95% ಮೇಲೆ ಮಾರ್ಕ್ಸ್ ಬರ್ತಾ ಇತ್ತು " ಅಂತ ಅವಳ ತಾಯಿ ನಮ್ಮ ಬಳಿ ಹೇಳುತ್ತಿದ್ದರು .ಹೋದ ತಿಂಗಳು ನಾನು ಶಂಶಾದ್ ಗೆ ಒಂದು ಸಾವಿರ ರೂಪಾಯಿ ಕೊಟ್ಟು, ಮಗಳಿಗೆ ಬಟ್ಟೆಗೆ ,ಅಥವಾ ಖರ್ಚಿಗೆ ಇಟ್ಟುಕೊಳ್ಳಲು ಹೇಳಿದ್ದೆ. "ಹಾಗೇನಾದರೂ ದುಡ್ಡು ಬೇಕಿದ್ದರೆ, ಕಡಿಮೆ ಬಂದರೆ ಕೇಳಿ" ಅಂದಿದ್ದೆ.ನಾನು ವಯಸ್ಸಲ್ಲಿ ಅವರಿಗಿಂತ ಚಿಕ್ಕವಳು ಎಂಬುಕ್ಕೇನೋ ಆಕೆ ವಿಪರೀತ ಸಂಕೋಚದಿಂದ ನಿರಾಕರಿಸಿ ನಾನು ಒತ್ತಾಯಿಸಿ ಕೊಟ್ಟದ್ದಕ್ಕೆ ದುಡ್ಡು ತೆಗೆದುಕೊಂಡರು. " ನೀವು ಕೊಟ್ಟ ದುಡ್ಡಿನಿಂದ ದಿನಾ ಅವಳು ಕಾಲೇಜ್ ಗೆ ಬಸ್ ನಲ್ಲಿ ಹೋಗಿಬರುತ್ತಿದ್ದಾಳೆ. ಆ ದುಡ್ಡಿನಲ್ಲಿ ವರ್ಷದ ಪಾಸ್ ಮಾಡಿಸಿಕೊಂಡಳು" ಅಂತ ಮನತುಂಬಿ, ಕೃತಜ್ಞತೆಯಿಂದ ಅವಳು ಹೇಳುವಾಗ ನನಗೇನೋ ಧನ್ಯತೆಯ ಭಾವನೆ .ಮತ್ತೆ ದುಡ್ಡು ಬೇಕು ಅಂತ ಅವರು ಕೇಳಲೇ ಇಲ್ಲ . ಈ ತಿಂಗಳೂ ಏನಾದರೂ ಖರ್ಚಿಗೆ ಬೇಕಾದಲ್ಲಿ ಕೇಳಿ ಎಂದೆ.... ಇಲ್ಲವೆಂದರು.. ನಾನು ಮತ್ತೆ ಕೇಳಿದ ಮೇಲೆ"ಸೋಮವಾರ ಫೀಸ್ ಕಟ್ಟಬೇಕು" ಅಂದರು. ಇವತ್ತು ಕೊಟ್ಟೆ.ಈ ಹೆಂಗಸಿನ ಸಂಕೋಚ, ಸ್ವಾಭಿಮಾನ, ಪುಟ್ಟ ಸಹಾಯಕ್ಕೂ ಕಣ್ಣಿನಲ್ಲಿಯೇ ಕೃತಜ್ಞತೆ ತೋರಿಸುವ ಇವರ,ಇವರ ಮಗಳ ಮೃದು- ಸ್ವಭಾವ ನನ್ನ ಬಾಯಿ ಕಟ್ಟಿಸಿಬಿಡುತ್ತದೆ. ಮಗಳಿಗೆ ಬ್ಯಾಂಕ್ ನಲ್ಲಿ ಕೆಲಸಕ್ಕೆ ಸೇರಿಸುವ ಕನಸಿದೆ. ಒಳ್ಳೆಯ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕಲಿ, ಇವಳ ಮಗಳ ಜೀವನ ಹೂವಿನ ಹಾಸಿಗೆಯಾಗಿರಲಿ..ಮನಸ್ಸು ತುಂಬಿ ಒಳಿತನ್ನು ಬಯಸುತ್ತೇನೆ...

No comments:

Post a Comment