ನಾನು ಹುಟ್ಟುವುದಕ್ಕೂ ಮುಂಚೆ ನಡೆದ ಒಂದು ಕೌಟುಂಬಿಕ ಜಗಳದಿಂದಾಗಿ ಅಪ್ಪ ನನ್ನಮ್ಮನನ್ನು ಕರೆದುಕೊಂಡು ಬೆಂಗಳೂರಲ್ಲಿ ವಾಸವಾಗಲು ಹೋದರು ..ಆಗ ಇನ್ನೂ ಬೆಂಗಳೂರು ಅಷ್ಟಾಗಿ ಬೆಳೆದಿರಲಿಲ್ಲ..ಹಳ್ಳಿಯ ವಾತಾವರಣಕ್ಕೆ ಒಗ್ಗಿಹೋದದ್ದರಿಂದ ಹೊಸ ಊರಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿಲ್ಲ.
ಹುಟ್ಟಿದ ಊರಾದ ಮೈಸೂರನ್ನು ಅಮ್ಮ ಮರೆಯಲೂ ಇಲ್ಲ.
ಅಮ್ಮ ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ.. ಅಪ್ಪನ ಜತೆಗೆ ಬೆಂಗಳೂರಿನ ಹೊಸಮನೆಗೆ ವಾಸವಾಗಲು ಹೋಗಿದ್ದಾಗ ಆದ ಅವರ ಅನುಭವಗಳನ್ನು ಅವರದೇ ಧಾಟಿಯಲ್ಲಿ ಹೇಳುತ್ತಿದ್ದೇನೆ...
ಒಂದು ದಿನ ಹೀಗೆ ಸಂಜೆ ಅಪ್ಪನಿಗಾಗಿ ಕಾಯುತ್ತ ,ಬೇಸರ ಬಂದು ರೇಡಿಯೋ ಹಾಕಿದಳು. ಆಗ ಹಳೇ ಹಾಡುಗಳು ಸಾಲಾಗಿ ಬರುತ್ತಿದ್ದವು.
" ಮೆಲ್ಲುಸಿರೇ ಸವಿ ಗಾನ ....
ಎದೆ ಝಲ್ಲನೇ ,ಹೂವಿನ ಬಾಣ..."ಅವಳ ಇಷ್ಟದ ಹಾಡು ಕೇಳುತ್ತಾ ಅಮ್ಮ ಮುಂದೆ ಹುಟ್ಟಲಿರುವ ತನ್ನ ಕಂದನಿಗಾಗಿ (ನಾನೇ!)ಸ್ವೆಟರ್ ಹೊಲೆಯುತ್ತಿದ್ದಳು...ಅಮ್ಮ ತನ್ನ ಇಷ್ಟದ ವಸ್ತುಗಳಾದ ತನ್ನ ಫೋಟೋ-ಗಳನ್ನು, ಜೋಪಾನವಾಗಿ ರೂಮಿನ ಕಿಟಕಿಯ ಬಳಿ ಇಡುತ್ತಿದ್ದಳು.ಅಪ್ಪ ಬರುವುದನ್ನು ಕಾಯುತ್ತ ಕೂತಿರುತ್ತಿದ್ದಳು..ಅವರ ಮನೆ ಪಕ್ಕದವರು ಯಾರೋ ಗೊತ್ತಿಲ್ಲ,ಬಾಗಿಲು ತೆಗೆದು ಹೊರ ಬರುವುದೇ ಇಲ್ಲವಲ್ಲ... ಒಂದು ದಿನ ಕೂಡ ಅವರು ಕಾಣಿಸಿರಲಿಲ್ಲ.ಅಮ್ಮನಿಗೆ ಅಲ್ಲಿ ಹೋಗಿ ನೋಡುವ ಕುತೂಹಲ.ಅಪ್ಪನಿಗೆ ಹೇಳಿದಾಗ ಅಪ್ಪ ಅವಳಿಗೆ ಅಲ್ಲಿಗೆ ಹೋಗಬಾರದೆಂದು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು...ಅಮ್ಮ ನನ್ನ ಹಾಗೇ, ಅತೀ ಬುದ್ಧಿ ..ನೋಡಿಯೇಬಿಡೋಣ ಅಂದುಕೊಂಡು
ಕುತೂಹಲದಿಂದ ಮರುದಿನ ಆ ಮನೆಗೆ ಹೋದಳು..
ಸುಮಾರು ೫೦ ವರ್ಷ ಹಳೆಯದಾದ ಮನೆ ಅದು.ಮನೆಯ ಸುತ್ತಲೂ ಎತ್ತರಕ್ಕೆ ನಿಲ್ಲಿಸಿದ, ಬಣ್ಣ ಮಾಸಿದ ಕಂಬಗಳು.ಅಮ್ಮ ಧೈರ್ಯ ಮಾಡಿ ಒಳಗೆ ಹೋದಳು ...
ಅವಳನ್ನು ಸ್ವಾಗತಿಸಿದ್ದು ಸುಮಾರು ೮೦-೯೦ ವಯಸಿನ ಒಬ್ಬ ಮುದುಕಿ. ನೋಡಲು ಗಟ್ಟಿ-ಮುಟ್ಟಾಗಿದ್ದಳು..ಹಲ್ಲುಗಳು ಬಿದ್ದುಹೋಗಿ ನಕ್ಕರೆ ವಿಕಾರವಾಗಿ ಕಾಣುತ್ತಿದ್ದಳು."ಏನು ಇಲ್ಲಿ ಬಂದಿರಿ!?" ಮುದುಕಿಯ ಪ್ರಶ್ನೆ ಕೇಳಿ ಸ್ವಲ್ಪ ಭಯಭೀತಳಾದ ಅಮ್ಮ "ನಾವು ನಿಮ್ಮ ನೆರೆಮನೆಗೆ ಹೊಸದಾಗಿ ಬಂದಿದ್ದೇವೆ..ನಿಮ್ಮನ್ನು ಮಾತನಾಡುವ ಸಲುವಾಗಿ ಹಾಗು ನಾಳೆ ನಮ್ಮ ಮನೆಯ ಪೂಜೆ ಇದೆ, ಕರೆದು ಹೋಗೋಣವೆಂದು ಬಂದೆ" ಅಂದಳು ... ಅವಳ ಮುಖದಲ್ಲಿ ಕಂಡುಬಂದ ಆತಂಕ ಅರಿತು ಮುದುಕಿ ಮನೆಯ ಒಳಗೆ ಕರೆದು, ಮಾತಾಡಿಸಿ, ಕುಂಕುಮ ಕೊಟ್ಟು ಕಳುಹಿಸಿದಳು..ಅಮ್ಮನಿಗೆ ಮನೆಗೆ ಬಂದ ನಂತರ ಅದೇಕೋ ಸುಸ್ತು, ವಾಂತಿ ಹಾಗೂ ವಿಪರೀತ ಜ್ವರ ...ಅವತ್ತು ಶನಿವಾರವಾದ್ದರಿಂದ ಅಪ್ಪ ಬೇಗ ಮನೆಗೆ ಬಂದರು..
ಅಮ್ಮ ನರಳುತ್ತಾ ಇದ್ದದ್ದನ್ನು ಕಂಡು ಡಾಕ್ಟರ್'ರ ಬಳಿ ಕರೆದುಕೊಂಡು ಹೋದಾಗ ತಿಳಿದು ಬಂತು ಅಮ್ಮ ಎರಡು- ತಿಂಗಳ ಗರ್ಭಿಣಿ.
ಅವಳ ಆರೈಕೆ ಮಾಡಲು ಯಾರೂ ಇಲ್ಲದಿರುವುದು ಅಮ್ಮನಿಗೆ ಮನಸ್ಸಿಗೆ ನೋವಾಗಿತ್ತು..
ತನ್ನ ಗಂಡ ಇಂತಹ ಸಮಯದಲ್ಲಿ ತನ್ನ ಜತೆಗೇ ಇರಬೇಕು ಅನಿಸುತ್ತಿದ್ದರೂ, ಅವರ ಕೆಲಸದಿಂದಾಗಿ ಅದು ಸಾಧ್ಯವಿಲ್ಲ ಎಂದು ಸುಮ್ಮನಿದ್ದಳು...
ನೆರೆಮನೆಯ ಮುದುಕಿ ಆಗಾಗ ಬಂದು ಅಮ್ಮನ ಆರೋಗ್ಯ ವಿಚಾರಿಸಿ, ಅವಳ ಜೊತೆ ಇದ್ದು ಹೋಗುತ್ತಿದ್ದಳಂತೆ.ಈ ವಿಷಯ ಅಪ್ಪನಿಗೆ ಗೊತ್ತಿಲ್ಲ..ಒಂದು ದಿನ ಬೆಂಗಳೂರಿನಲ್ಲೇ ಇರುವ ಮಾವ(ಅಮ್ಮನ ಸ್ವಂತ ತಮ್ಮ) ಅಕ್ಕನನ್ನು ನೋಡಿಕೊಂಡು ಹೋಗಲು ಬಂದನು. ಆಗ ಮನೆಯಲ್ಲಿ ಅಮ್ಮನ ಜೊತೆ ಆ ಮುದುಕಿ ಕೂಡ ಇದ್ದಳು.. ಆಕೆ ಏನನ್ನೋ ಅಮ್ಮನಿಗೆ ತಿನ್ನಲು ಕೊಡುತ್ತಿದ್ದಳು ... ಮಾವ ಅದನ್ನು ನೋಡಿ ಗಾಬರಿಯಾಗಿಅಪ್ಪನ ಆಫೀಸ್ ಹುಡುಕಿಕೊಂಡು ಹೋಗಿ, ಅಪ್ಪನಿಗೆ ತಕ್ಷಣ ಎಲ್ಲಾ ವಿಷಯ ಹೇಳಿದಾಗ ಮನೆಗೇ ಬಂದು ಅಪ್ಪ ಆ ಮುದುಕಿಗೂ,ಅಮ್ಮನಿಗೂ ಬೈದು ಮತ್ತೆ ಯಾವತ್ತೂ ಆಕೆ ಮನೆಗೆ ಬರಬಾರದೆಂದು ಹೇಳಿದರು..ಕಾರಣ ಆ ಮುದುಕಿ ಒಬ್ಬಳು ಮಾಟಗಾತಿ..
ಆಕೆಗೆ ಮಕ್ಕಳಾಗುವುದಿಲ್ಲ ಎಂದು ಅವಳ ಗಂಡ ಬೇರೆ ಹೆಂಗಸನ್ನು ಮದುವೆ ಮಾಡಿಕೊಂಡು ಇವಳನ್ನು ಬಿಟ್ಟು ಹೋದನಂತೆ... ಅಂದಿನಿಂದ ಈಕೆಗೆ ಯಾರಾದರೂ ಪುಟ್ಟ ಮಕ್ಕಳು ಕಂಡರೆ, ಅವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ ಅವರನ್ನು ಬಲಿಕೊಡುತ್ತಿದ್ದಳಂತೆ..ಅದು ಸಾಧ್ಯವಿಲ್ಲ ಎಂದಾದರೆ ಗರ್ಭದಲ್ಲಿಯೇ ಮಗು ಸಾಯುವಂತೆ ಮದ್ದು ಮಾಡಿ ತಿನಿಸುತ್ತಿದ್ದಳಂತೆ..
ಆ ಹೆಂಗಸಿನ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲವೆಂದು, ಎಲ್ಲರೂ ಅವರ ಮಕ್ಕಳನ್ನು ಜೋಪಾನ ನೋಡಿಕೊಳ್ಳುತ್ತಿದ್ದರು...
ಆ ಜಾಗಕ್ಕೆ ಹೊಸದಾಗಿ ಬಂದವರಿಗೆ ಹೇಗೆ ಗೊತ್ತಾಗಬೇಕು..!!
ಅಂದು ಮಾವ ಬರದೇ ಹೋಗಿದ್ದರೆ, ಆ ಮುದುಕಿ ಅಮ್ಮನಿಗೆ ಏನನ್ನೋ ತಿನಿಸಿ ಅವಳಿಗೆ ಗರ್ಭಪಾತ ಮಾಡಿಸಿಬಿಡುತ್ತಿದ್ದಳು...
ಆ ಘಟನೆ ನಡೆದ ನಂತರ ಅಮ್ಮ ಬಹಳ ಎಚ್ಚರಿಕೆಯಿಂದ ಇರುತ್ತಾಳೆ..ನನಗೂ ಹೀಗೆ ಆಕಸ್ಮಿಕವಾಗಿ ಪರಿಚಯವಾದ ಒಬ್ಬಳು ಹೆಂಗಸನ್ನು ಮನೆಗೆ ಬರಲು ಹೇಳಿದ್ದೆ.. ಆದರೆ ಆಕೆ ಕೆಟ್ಟ ಹೆಂಗಸಲ್ಲ..ಒಳ್ಳೆಯ ಹಾಗೂ ತನ್ನ ಗಂಡ ,ಮಕ್ಕಳ ಜೊತೆ ಬಾಳುತ್ತಿರುವಾಕೆ..
ಅಮ್ಮನಿಗೆ ಅಂದು ನಡೆದ ಘಟನೆ ಮತ್ತೆ ನಡೆದುಹೋದೀತು ಎಂಬ ಭಯ ...
ಯಾವಾಗಲೂ ಹೇಳುತ್ತಿದ್ದಳು "ಯಾರನ್ನೂ ಹೀಗೇ ಎಂದು ಹೇಳಲಾಗದು .."
ಆ ಭಯದ ಹಿಂದೆ ಹೀಗೊಂದು ಭೀಕರ ನೆನಪು ಇದೆ ಎಂದು ನನಗೆ ಗೊತ್ತಿರಲಿಲ್ಲ ...
"ಆ ಮಾಟಗಾತಿ ಮುದುಕಿ, ನನ್ನಂತೆಯೇ ಅದೆಷ್ಟು ಮುಗ್ಧೆಯರನ್ನು ಮರಳುಮಾಡಿ, ಅವರ ಮಕ್ಕಳನ್ನು ಕೊಂದಿದ್ದಾಳೋ....
ನೆನೆದರೆ ಈಗಲೂ ಮೈ ಝಮ್ ಎನಿಸುತ್ತದೆ" ಅನ್ನುತ್ತಾಳೆ ಅಮ್ಮ..