Saturday, February 21, 2015

ಮುತ್ತಿನಂಥ ಮಾತು

ಕನಸುಗಳು ಸಾಕಾರಗೊಳ್ಳಲು ಶ್ರದ್ಧೆ, ಸಮಾಧಾನ ,ಸಂಯಮ ಹಾಗೂ ಕಾರ್ಯನಿಷ್ಠೆ ಇರಬೇಕು.

Wednesday, February 18, 2015

ಧೃತಿ- ಬಾಳಿನ ಬೆಳಕು

ಸಮನ್ವಿತಾ ಕಾಲೇಜಿಂದ ಮನೆಗೆ ಬಂದಾಗ ಐದು ಗಂಟೆ ಆಗಿತ್ತು.ಸುಸ್ತಾಗಿ ಬಂದವಳನ್ನು ಸ್ವಾಗತಿಸಿದ್ದು ಮನೆಮುಂದೆ ಬಿದ್ದಿದ್ದ ಐದಾರು ಕಾಗದಗಳು,ಕವರುಗಳು. ಬಾಗಿಲು ತೆಗೆದು ಬ್ಯಾಗನ್ನು ಸೋಫಾದ ಮೇಲೆಸೆದು ಕಿಟಕಿಯ ಬಳಿ ಕುಳಿತಳು.
ಅಲ್ಲಿ ಅವಳ ಅಮ್ಮನ ಫೋಟೋ ಪುಟ್ಟ ಗಾಜಿನ ಫ್ರೇಮಿನೊಳಗೆ ಧೂಳು ಹಿಡಿದು ಕುಳಿತಿತ್ತು. ಅದನ್ನು ಒರೆಸಿಟ್ಟಳು. ಹಾಗೇ ಬೇಸರದಿಂದ ಊಟ ಮಾಡಿ, ಸ್ವಲ್ಪ ಟಿ.ವಿ ನೋಡಿದ ಕೂಡಲೇ ನಿದ್ರೆ ಬರುವಂತಾಯಿತು. ಟಿ.ವಿ ಆರಿಸಿ ತನ್ನ ರೂಮಿಗೆ ಬಂದಳು.ಬೆಳಿಗ್ಗೆ ಅರ್ಧ ತಿಂದುಳಿದ ಬಿಸ್ಕೆಟ್ ನ ಪ್ಯಾಕೆಟ್ ಮಂಚದ ಮೇಲೇ ಇತ್ತು.ಅದನ್ನು ಎತ್ತಿಟ್ಟು ಅಲ್ಮೇರಾದ ಮೇಲೆ ಅಂಟಿಸಿದ್ದ ದೇವರ ಚಿತ್ರಕ್ಕೊಮ್ಮೆ ಕೈಮುಗಿದು ದಿಂಬನ್ನು ಸರಿಸಿ ಮೆತ್ತನೆ ಹಾಸಿಗೆಯಲ್ಲಿ ಮಲಗಿದಳು.ಆಗ ತಾನೇ ಟಿ.ವಿಯಲ್ಲಿ ನೋಡಿದ್ದ ಜಾಹೀರಾತು ನೆನಪಾಯಿತು. ಹುಂಜವು ತನ್ನ ಮಗನಿಗೆ ಬಯ್ಯುತ್ತ
"ಯಾವಾಗಲೂ ಹೇಂಟೆಗಳ ಹಿಂದೇನೇ ಇರ್ತೀಯಾ "ಅಂದದ್ದು .. ಅವಳಿಗೆ ತುಂಬಾ ನಗು. ಯಾವಾಗ ನಿದ್ರೆಗೆ ಜಾರಿದಳೋ ಗೊತ್ತಾಗಲೇ ಇಲ್ಲ. ಅವಳ ಅಕ್ಕ ನಿತ್ಯಾ ಬಂದು ಬಾಗಿಲು ಬಡಿದದ್ದೂ ಆಯ್ತು, ಫೋನ್ ಕೂಡ ಮಾಡಿದ್ದಾಯ್ತು.. ಕೊನೆಗೆ ಸಾಕಾಗಿ ಬೇರೆ ಕೀ ಇಂದ ಬಾಗಿಲು ತೆಗೆದು ಒಳಗೆ ಬಂದಳು. ಸಮನ್ವಿತಾ ನಿದ್ದೆಯಲ್ಲಿ ಕನವರಿಸುತ್ತಾ ಮಲಗಿದ್ದಳು.ಅದನ್ನು ನೋಡಿ ನಿತ್ಯಳಿಗೆ ಆಫೀಸಿನ ಕೆಲಸದ ದಣಿವೆಲ್ಲ ಮಾಯವಾಗಿ ನಗು ಮುಖದ ಮೇಲೆ ಕಾಣಿಸಿತು. ಅವಳು ತಕ್ಷಣ ಫೋನ್ ತೆಗೆದುಕೊಂಡು ಸಮನ್ವಿತಳ ಮಾತನ್ನು ರೆಕಾರ್ಡ್ ಮಾಡಿದಳು, ತಂಗಿ ಎದ್ದಮೇಲೆ ಅವಳಿಗೆ ರೇಗಿಸುವ, ಮುದ್ದಾಗಿ ಕೀಟಲೆ ಮಾಡುವ ಉದ್ದೇಶದಿಂದ. ಅಪ್ಪ, ಅಮ್ಮನನ್ನು ಕಾಣದ ಪುಟ್ಟ ಹುಡುಗಿಯನ್ನು ಚಿಕ್ಕಂದಿನಿಂದ ಅಮ್ಮನಷ್ಟೇ ಜವಾಬ್ದಾರಿಯಿಂದ ನೋಡಿಕೊಂಡ ನಿತ್ಯಳಂತಹ ಅದೆಷ್ಟೋ ಹೆಣ್ಣುಮಕ್ಕಳು ನಮಗೆ ಸ್ಪೂರ್ತಿಯಾಗಿ ,ನಮ್ಮ ಬದುಕಿನೆಡೆಗೆ ಇರುವ ನಿಲುವನ್ನು ಬದಲಾಯಿಸಿ,  ಜೀವನಕ್ಕೆ ಹಾಗೂ ಮನುಷ್ಯತ್ವಕ್ಕೆ ನ್ಯಾಯ ಒದಗಿಸುತ್ತಾರೆ.
-ಪ್ರಿಯಾಂಕಾ