Saturday, December 5, 2015

ಮನಸಿನ ಮಾತು-೧

...☔ ಮಳೆ ನೀರು.... ಂಭ್ರ .
-.-.-.-.-.-.-.-.-.-.-.-.-.-.-.-.-.-.-.-.-.-.-.-.-
ಮಳೆಗಾಲದ ಮಜವೇ ಬೇರೆ..ಮನೆಯಲ್ಲಿ ಕುಳಿತು ಅಮ್ಮ ಮಾಡಿಕೊಟ್ಟ ಬಜ್ಜಿಯೊಂದಿಗೆ ಬೆಚ್ಚಗೆ ಕಾಫಿ ಹೀರುವ ಆ ಅನುಭವವೇ ಅದ್ಭುತವಾದದ್ದು.
ಅಮ್ಮನ ಹಾಗೆ ಅದ್ಭುತ ಕೈರುಚಿ ನನ್ನ ತಂಗಿಗಲ್ಲದೇ ಬೇರಾರಿಗೂ ಇಲ್ಲ..
ಇಂದಿಗೂ ಆ ಕ್ಷಣಗಳು ಮತ್ತೆ ಕಾಣ ಸಿಗಬಹುದೇನೊ,ಅನಿಸುತ್ತದೆ.
ನನ್ನ ಅಸ್ಸಾಮಿ ರೂಮ್ ಮೇಟ್ ಅಂತೂ ಯಾವಾಗಲೂ ಹೇಳುತ್ತಿರುತ್ತಾಳೆ
..."Priya, you seem to be missing your family!! Aren't you?"
ಅದು ನಿಜವೇ
...
ಇಂಜಿನಿಯರಿಂಗ್ ಓದಲು ಮನೆಯಿಂದ ನೂರಾರು ಮೈಲು ದೂರ ಬಂದ ನನಗೆ ಮನೆ ಅಡುಗೆ ಬೇಕನಿಸುತ್ತಿತ್ತು.
ಅಲ್ಲೇ ಊರಿನಲ್ಲೆ ಓದುತ್ತಿರುವ ತಂಗಿ ಬಗ್ಗೆ ಸ್ವಲ್ಪ ಅಸೂಯೆ ಮೂಡಿದ್ದೂ ನಿಜ .. ಮನೆಗೆ ಓಡಿಹೋಗಿಬಿಡಬೇಕು ಅನಿಸುವಷ್ಟು ಮನೆಯವರ ನೆನಪು ಕಾಡುತ್ತಲೇ ಇತ್ತು .
ಅಂತೂ ರಜೆ ಸಿಕ್ಕು ಮನೆಗೆ ಹೋಗಲು ಸಂಭ್ರಮದಿಂದ ಟ್ರೈನ್ ಹತ್ತಿ ಕುಳಿತಿದ್ದೆ.
ಹಿಂದೆ ಸಾಗುತಿರುವ ಮರಗಳು ,ರೋಡ್, ಮನೆಗಳು ನನಗೇನೋ ಹೊಸದಾಗಿ ಕಂಡವು.
ಜಗತ್ತನ್ನು ಅದೇ ಮೊದಲು ಕಣ್ತೆರೆದು ನೋಡುವ ಪುಟ್ಟ ಮಗುವಿನ ಹಾಗೆ.. ಎಲ್ಲವೂ ಏನನ್ನೋ ಹೇಳುತ್ತಿದ್ದಂತೆ ಭಾಸವಾಗುತ್ತಿತ್ತು.
ಮನಸು ಹಾಗೆಯೇ ಆ ನೆನಪಿನ ಪರದೆ ಸರಿಸುತ್ತಾ ಹೋಯಿತು...

-.-.-.-.-.-.-.-.-.-.-.-.-.-.-.-.-.-.-.-.-.-.-.-
<p> ಆಗ ಇನ್ನೂ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ.
ತಂಗಿ ಇನ್ನೂ ಚಿಕ್ಕ ಮಗು.
ಅಮ್ಮ ಸದಾ ಖಾಯಿಲೆಯಿಂದ ಬಳಲುತ್ತಿದ್ದಳು.ನಮಗೆ ಆಗ ಏನೂ ಅದರ ಅರಿವಿರಲಿಲ್ಲ.
ಅಮ್ಮ ಅಪ್ಪನನ್ನು ಪ್ರೀತಿಸಿದಷ್ಟು ಅಪ್ಪ ಆಕೆಯನ್ನು ಪ್ರೀತಿಸಲಿಲ್ಲ. ಅವರು ಸದಾ ಅಮ್ಮನನ್ನು ದೂರುತ್ತಾ,ಜಗಳವಾಡುತ್ತಾ ಆಕೆಯ ಆರೋಗ್ಯ ಹದಗೆಡುತ್ತ ಹೋದಂತೆ ಅವಳ ಬಗ್ಗೆ ಕಾಳಜಿ ಮಾಡುವುದನ್ನೇ ಬಿಟ್ಟರು. ಅಮ್ಮ ಜೀವನದಲ್ಲಿ ತುಂಬಾ ನೊಂದುಬಿಟ್ಟಿದ್ದಳು.
ನಾನು ಅಮ್ಮನನ್ನು ಗೋಳಾಡಿಸಿದ ರೀತಿ ನನಗಿನ್ನೂ ನೆನಪಿದೆ. ಆದರೆ ನಾನು ಇಂದಿಗೂ ಆಕೆಯನ್ನು ದೇವರು ಮತ್ತೆ ನಮ್ಮ ಬಳಿ ಕಳುಹಿಸಲೆಂದು ಆಶಿಸುತ್ತೇನೆ. ಹಾಗಾದರೂ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವ ಭಾಗ್ಯ ನನ್ನದಾಗುವುದೇನೋ ಎಂಬ ಆಶಯ.
ಅಮ್ಮ ಯಾವಾಗಲೂ ತನ್ನ ಆರೋಗ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ನಮ್ಮ ಕಾಳಜಿ ಮಾಡುತ್ತಿದ್ದಳು. ಮಳೆ,ಬಿಸಿಲೆನ್ನದೇ ಮೆಡಿಕಲ್ ಶಾಪ್ ನೋಡಿಕೊಂಡು ಅಪ್ಪನ ಸಾಲವನ್ನು ಆದಷ್ಟು ತೀರಿಸಿದಳು.ಮನೆಯವರಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಅಮ್ಮ ಈಗ ಬಹಳ ನೆನಪಾಗುತ್ತಾಳೆ.
ಅವಳ ಕೈರುಚಿ, ಅವಳ ಪ್ರತಿ ಮಾತು,ಅವಳ ಎಲ್ಲಾ ನೆನಪುಗಳು ಸಹ  ನನ್ನ ಮನಸಿನ ಮಹಲಿನಲ್ಲಿ ಭದ್ರವಾಗಿದೆ.ಅಮ್ಮ ಇದ್ದಾಗ ಅವಳ ಕಾಳಜಿ ಮಾಡಿದ್ದಿದ್ದರೆ ಬಹುಶಃ ಅವಳು ಇಂದು ನಮ್ಮೊಂದಿಗೆ ಇರುತ್ತಿದ್ದಳೇನೋ....ಆ ನೋವು, ಅವಳಿಗೆ ಒಂದು ದಿನವೂ ನಾನು ಪ್ರೀತಿಯಿಂದ ಮಾತನಾಡಿಸಲಿಲ್ಲ ಎಂಬ ಕೊರಗು ನನ್ನ ಮನದಾಳದಲ್ಲಿ ಸದಾ ಕಾಡುತ್ತದೆ.
ಹೀಗೆ ನನ್ನ ನೆನಪಿನ ಚಿತ್ರಗಳು, ಕಣ್ಣಮುಂದೆ ಹೋದಂತಾಯಿತು
.ಅಷ್ಟರಲ್ಲಿ ಟ್ರೈನ್ ಆಗಲೇ ಊರು ತಲುಪಿತ್ತು.
ಬಾಗ್ ಗಳನ್ನು ಹಿಡಿದು ಇಳಿದು ಹೊರನಡೆದಾಗ ಸಣ್ಣದಾಗಿ ಮಳೆ ಹನಿ ಬೀಳತೊಡಗಿತ್ತು.
ಆ ಮಳೆಯ ಸ್ಪರ್ಶವು ಮನಸಿಗೆ ಹಿತ ಎನಿಸಿ ನೆಮ್ಮದಿಯಿಂದ ತಂಗಿಯನ್ನು ನೋಡುವ ಆತುರದಿಂದ ಮನೆಕಡೆ ನಡೆದೆ.
-.-.-.-.-.-.-.-.-.-.-.-.-.-.-.-.-.-.-.-.-.-.-.-.-