Wednesday, June 17, 2015

ವಾಸ್ತವ...

ನನ್ನವರು ಹಾಗಿರಬೇಕು,ಹೀಗಿರಬೇಕು ಎಂಬ ಕನಸು ಸಾಮಾನ್ಯವಾಗಿ ನನ್ನ ವಯಸಿನ ಎಲ್ಲಾ ಹುಡುಗಿಯರಿಗೂ ಇರುತ್ತೆ...
ಅದು ಅತೀ ಅನಿಸದಿದ್ದರೂ ಸ್ವಲ್ಪ ಹೆಚ್ಚೇ ಅನ್ನುವಂತೆ...ನಾನು ಇವರನ್ನು ಇಷ್ಟೊಂದು ಹಚ್ಚಿಕೊಂಡದ್ದು ಯಾಕೋ ಸರಿಯಾಗಿಲ್ಲ ಅಂದುಕೊಳ್ಳುತ್ತಿದ್ದೆ...ಅವರು ಮನೆಗೆ ಬಂದಾಗ, ನನ್ನ ಕಿವಿಯೆಲ್ಲ ಇವರ ಮಾತಿನ ಕಡೆಗೆ ..
ನನ್ನ ಬಾಳಲ್ಲಿ ಅವರ ಆಗಮನದಷ್ಟೇ ಬೇಗ ಅವರ ನಿರ್ಗಮನವೂ ಆಗುತ್ತಿದೆಯೋ ಎಂದು ಈಗ ಭಯವಾಗುತ್ತಿದೆ..ಇಂದು ಇಲ್ಲಿ ಬಂದ ಅವರು ಹೆಚ್ಚಿನ ಮಾತಾಡದೆ ಇದ್ದದ್ದು ನನಗೇನೋ ಬೇಸರವಾಯಿತು ಆದರೆ ನಿಜವಾಗಿ ನನ್ನ ಮನಸ್ಸು ಅವರಲ್ಲಿಯೇ ಇತ್ತು.ನಗು,ಮಾತು ಹಾಗೂ ಅವರ ಪ್ರತೀನೋಟ ನನ್ನನ್ನು ಸಂತಸಗೊಳ್ಳುವಂತೆ ಮಾಡುತ್ತಿತ್ತು... .. ನಾವು ಪ್ರೀತಿಸುವವರನ್ನು ಯಾರಾದರೂ ಬಿಟ್ಟು ಕೊಡುವುದಿಲ್ಲ
...ಆ ಪರಿಸ್ಥಿತಿ ನನಗೀಗ ಬಂದಿದೆ..ಅವರಿಗೆ ಮದುವೆ, ನನ್ನೊಂದಿಗೆ ಕನಸಿನಲ್ಲಿ ....ಬೇರೆಯವರ ಜತೆಗೆ-ವಾಸ್ತವದಲ್ಲಿ...

ಕಂದಮ್ಮ

ನೀನಿಲ್ಲದೆ ಬದುಕು ನೀರಸ ಅನಿಸಿದೆ, ಆಕಾಶ, ಭೂಮಿಗೂ ನಡುವೆ ಎಷ್ಟು ಅಂತರವಿದೆ ನನ್ನ-ನಿನ್ನ ನಡುವೆ ಈ ಅಂತರ ಬೇಡವಿತ್ತು... ನಿನ್ನ ನಗು ಮನೆ ತುಂಬಿದರೆ ಸಾಕಾಗಿತ್ತು.... ಅನುಕ್ಷಣ, ಕಣ್ಣಮುಂದೆ ನೀ ನಕ್ಕು-ನಲಿಯುತ್ತಿದ್ದರೆ ಅದೇ ಸಾಕಾಗಿತ್ತು ... ನಿನ್ನ ಅಂದದ ಪುಟ್ಟ ಬೆರಳು ಹಿಡಿದು ನಾ ನಡೆಸಿದ್ದರೆ ಸಾಕಾಗಿತ್ತು ... ಸ್ವರ್ಗವೆಂಬುದು ಏನೆಂದು ನನಗೆ ವಾಸ್ತವದಲ್ಲಿ ಅನುಭವವಾಗಲು...
--ಪರಿಧೀ --

Sunday, June 14, 2015

ಕೃತಜ್ಞತೆ(Gratitude)

ನಾನು ಎಂದೂ ದೊಡ್ಡ ದೊಡ್ಡ ದಾನ, ಧರ್ಮ ಮಾಡುವುದಿಲ್ಲ. ಪಾಪ, ಪುಣ್ಯಗಳ ಹಂಗಿಲ್ಲದೆ ಕೈಲಾದಷ್ಟು, ಸಣ್ಣ ಪುಟ್ಟ 'ನಿಜವಾದ ಅವಶ್ಯಕತೆ ಇದ್ದವರಿಗೆ ಮಾತ್ರ' ಹಣ ಸಹಾಯ ಮಾಡುವ ಅಭ್ಯಾಸವಿದೆ. ಹಾಗೆ ಸಹಾಯಮಾಡಿ ನೋಡಿ. ನಾವು ದಾನ ಮಾಡಿದ ದುಡ್ಡಿಗಿಂತ ಹತ್ತು ಪಾಲು ಖುಷಿ ನಮಗೆ ಸಿಕ್ಕಿರುತ್ತದೆ. ಬಲಗೈ ಕೊಟ್ಟದ್ದು ಎಡಗೈಗೂ ಗೊತ್ತಾಗಬಾರದು ಎಂದು ಹೇಳುತ್ತಾರೆ. ನಾನು ಮಾಡಿದ್ದನ್ನು ಹೇಳಿಕೊಳ್ಳಬೇಕೆಂದಲ್ಲ . ಆದರೆ ಕೆಲವರ ಸ್ವಭಾವ ಎಷ್ಟು ಘನತೆಯಿಂದ ಕೂಡಿರುತ್ತದೆ ಎಂಬುದಕ್ಕೆ ನಿದರ್ಶನ ಕೊಡಲು ಇದನ್ನು ಬರೆಯುತ್ತಿದ್ದೇನೆ.ನಮ್ಮ ಆಫೀಸ್ ನಲ್ಲಿ ಒಬ್ಬರು ಮುಸ್ಲಿಂ ಹೆಂಗಸು ಹೊಸದಾಗಿ ಕೆಲಸಕ್ಕೆ ಸೇರಿದ್ದಾರೆ. ಹೆಸರು ಶಂಶಾದ್ ಬಾನು. ಈಕೆ ಅಕೌಂಟೆಂಟ್. ಸಾಮಾನ್ಯವಾಗಿ ಮುಸ್ಲಿಂ ಆಗಿ ಬುರ್ಖಾ ಹಾಕದ ಹೆಂಗಸರನ್ನು ನಾನು ನೋಡಿದ್ದು ತೀರಾ ಕಡಿಮೆ. ಈಕೆ ಅವರೊಳಗೆ ಒಬ್ಬರು. ಒಳ್ಳೊಳ್ಳೆ, ಚಂದದ ಸೀರೆ ಉಟ್ಟು ಲಕ್ಷಣವಾಗಿ ಬರುತ್ತಾರೆ. ಸಂಕೋಚ ಸ್ವಭಾವದ, ಕ್ಲೀನಾಗಿರುವ, ಎಷ್ಟೋ ವರ್ಷಗಳಿಂದ ತನ್ನ ಪಾಡಿಗೆ ತಾನು ಅಚ್ಚುಕಟ್ಟಾಗಿ ಕೆಲಸಮಾಡಿಕೊಂಡು ಹೋಗುವ ,ಮಿತಭಾಷಿ. ಈಕೆ ನನ್ನ ಫೇವರಿಟ್. ಸಮಯ ಸಿಕ್ಕಾಗಲೆಲ್ಲ ಅವರ ಬಳಿ ಮಾತಾಡುತ್ತಿರುತ್ತೇನೆ. ಈಕೆಗೆ ಒಬ್ಬ ಮಗ, ಮಗಳು. ಮಗ ಗಾರೇಜ್ ನಲ್ಲಿ ಕೆಲಸ ಮಾಡುತ್ತಾನೆ. ಮಗಳು ತುಂಬಾ ಬುದ್ಧಿವಂತೆ. ಈಗಷ್ಟೇ ಬಿ. ಕಾಮ್ ಫೈನಲ್ ಇಯರ್ ಮುಗಿಸಿದ್ದಾಳೆ. ಹೋದ ವರ್ಷ ಈ ಹುಡುಗಿ ೨ನೇ PUC ಯಲ್ಲಿ, ಟ್ಯೂಷನ್ ಇಲ್ಲದೆಯೇ, ಯಾವುದೋ ಪುಟ್ಟದೊಂದು ಕಾಲೇಜ್ ನಲ್ಲಿ ಓದಿ 89% ಮಾರ್ಕ್ಸ್ ತೆಗೆದಿದ್ದಳು. ಈ ಹುಡುಗಿ ಹಗಲೂ-ರಾತ್ರಿ, ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಓದುವುದಿಲ್ಲ. ದಿನಕ್ಕೆ ಹೆಚ್ಚೆಂದರೆ 2 ತಾಸು ಓದುತ್ತಾಳಂತೆ ಅಷ್ಟೇ. "ಇನ್ನೊಂದು ಗಂಟೆ ಹೆಚ್ಚು ಓದಿದ್ದರೂ 95% ಮೇಲೆ ಮಾರ್ಕ್ಸ್ ಬರ್ತಾ ಇತ್ತು " ಅಂತ ಅವಳ ತಾಯಿ ನಮ್ಮ ಬಳಿ ಹೇಳುತ್ತಿದ್ದರು .ಹೋದ ತಿಂಗಳು ನಾನು ಶಂಶಾದ್ ಗೆ ಒಂದು ಸಾವಿರ ರೂಪಾಯಿ ಕೊಟ್ಟು, ಮಗಳಿಗೆ ಬಟ್ಟೆಗೆ ,ಅಥವಾ ಖರ್ಚಿಗೆ ಇಟ್ಟುಕೊಳ್ಳಲು ಹೇಳಿದ್ದೆ. "ಹಾಗೇನಾದರೂ ದುಡ್ಡು ಬೇಕಿದ್ದರೆ, ಕಡಿಮೆ ಬಂದರೆ ಕೇಳಿ" ಅಂದಿದ್ದೆ.ನಾನು ವಯಸ್ಸಲ್ಲಿ ಅವರಿಗಿಂತ ಚಿಕ್ಕವಳು ಎಂಬುಕ್ಕೇನೋ ಆಕೆ ವಿಪರೀತ ಸಂಕೋಚದಿಂದ ನಿರಾಕರಿಸಿ ನಾನು ಒತ್ತಾಯಿಸಿ ಕೊಟ್ಟದ್ದಕ್ಕೆ ದುಡ್ಡು ತೆಗೆದುಕೊಂಡರು. " ನೀವು ಕೊಟ್ಟ ದುಡ್ಡಿನಿಂದ ದಿನಾ ಅವಳು ಕಾಲೇಜ್ ಗೆ ಬಸ್ ನಲ್ಲಿ ಹೋಗಿಬರುತ್ತಿದ್ದಾಳೆ. ಆ ದುಡ್ಡಿನಲ್ಲಿ ವರ್ಷದ ಪಾಸ್ ಮಾಡಿಸಿಕೊಂಡಳು" ಅಂತ ಮನತುಂಬಿ, ಕೃತಜ್ಞತೆಯಿಂದ ಅವಳು ಹೇಳುವಾಗ ನನಗೇನೋ ಧನ್ಯತೆಯ ಭಾವನೆ .ಮತ್ತೆ ದುಡ್ಡು ಬೇಕು ಅಂತ ಅವರು ಕೇಳಲೇ ಇಲ್ಲ . ಈ ತಿಂಗಳೂ ಏನಾದರೂ ಖರ್ಚಿಗೆ ಬೇಕಾದಲ್ಲಿ ಕೇಳಿ ಎಂದೆ.... ಇಲ್ಲವೆಂದರು.. ನಾನು ಮತ್ತೆ ಕೇಳಿದ ಮೇಲೆ"ಸೋಮವಾರ ಫೀಸ್ ಕಟ್ಟಬೇಕು" ಅಂದರು. ಇವತ್ತು ಕೊಟ್ಟೆ.ಈ ಹೆಂಗಸಿನ ಸಂಕೋಚ, ಸ್ವಾಭಿಮಾನ, ಪುಟ್ಟ ಸಹಾಯಕ್ಕೂ ಕಣ್ಣಿನಲ್ಲಿಯೇ ಕೃತಜ್ಞತೆ ತೋರಿಸುವ ಇವರ,ಇವರ ಮಗಳ ಮೃದು- ಸ್ವಭಾವ ನನ್ನ ಬಾಯಿ ಕಟ್ಟಿಸಿಬಿಡುತ್ತದೆ. ಮಗಳಿಗೆ ಬ್ಯಾಂಕ್ ನಲ್ಲಿ ಕೆಲಸಕ್ಕೆ ಸೇರಿಸುವ ಕನಸಿದೆ. ಒಳ್ಳೆಯ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕಲಿ, ಇವಳ ಮಗಳ ಜೀವನ ಹೂವಿನ ಹಾಸಿಗೆಯಾಗಿರಲಿ..ಮನಸ್ಸು ತುಂಬಿ ಒಳಿತನ್ನು ಬಯಸುತ್ತೇನೆ...

ಮನಸೇ ಮಹಾ ಮರ್ಕಟ ;-)

ಮನಸ್ಸು ಎಷ್ಟು ತರಲೆ ಗೊತ್ತಾ...ಅದಕ್ಕೆ ಇಷ್ಟಪಟ್ಟದ್ದು ಇನ್ನೇನೂ ಸಿಕ್ಕಿಬಿಡ್ತು ಅನ್ನುವಾಗ ಬೇರೇನೋ ಬೇಡಿಕೆ ಮುಂದಿಡುತ್ತದೆ... ನಿನ್ನೆ ಹೀಗೇ ಶಾಪಿಂಗ್ ಗೆ ಅಂತ ಹೋಗಿದ್ದೆ.ಅಲ್ಲಿ ಒಂದು ಮುತ್ತಿನ ಸರ ಇಷ್ಟ ಆಯ್ತು ... ಇಷ್ಟಪಡೋಕ್ಕೇನೂ ;) ದುಡ್ಡು ಕೊಡಬೇಕಾ ... ಸರಿ, ಹೇಗಾದರೂ ಇನ್ಸ್ಟಾಲ್ಮೆಂಟ್ನಲ್ಲಿ ದುಡ್ಡು ಕಟ್ಟಿದರಾಯ್ತು ಅಂದುಕೊಂಡು ಕೌಂಟರ್ ಹತ್ತಿರ ಹೋಗ್ತಿದ್ದೆ.... ದೂರದಲ್ಲಿ ಯಾರಿಗೂ ಕೈಗೆಟುಕದ ಬೆಲೆ ಬಾಳುವ ಡೈಮಂಡ್ ಸರವೊಂದು ಮನಸ್ಸನ್ನು ಕದ್ದುಕೊಂಡಿದ್ದಲ್ಲದೇ, ನನ್ನ ತಿಂಗಳ ಸಂಬಳವನ್ನೂ ನುಂಗಿಹಾಕಿತು!! :P ಮನಸ್ಸೇ ...ನೀನು ಮರ್ಕಟವೇ ಸರಿ ;) 😝😁😁 #priyankarao

ಭೀತಿ..

ನಾನು ಹುಟ್ಟುವುದಕ್ಕೂ ಮುಂಚೆ ನಡೆದ ಒಂದು ಕೌಟುಂಬಿಕ ಜಗಳದಿಂದಾಗಿ ಅಪ್ಪ ನನ್ನಮ್ಮನನ್ನು ಕರೆದುಕೊಂಡು ಬೆಂಗಳೂರಲ್ಲಿ ವಾಸವಾಗಲು ಹೋದರು ..ಆಗ ಇನ್ನೂ ಬೆಂಗಳೂರು ಅಷ್ಟಾಗಿ ಬೆಳೆದಿರಲಿಲ್ಲ..ಹಳ್ಳಿಯ ವಾತಾವರಣಕ್ಕೆ ಒಗ್ಗಿಹೋದದ್ದರಿಂದ ಹೊಸ ಊರಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿಲ್ಲ. ಹುಟ್ಟಿದ ಊರಾದ ಮೈಸೂರನ್ನು ಅಮ್ಮ ಮರೆಯಲೂ ಇಲ್ಲ. ಅಮ್ಮ ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ.. ಅಪ್ಪನ ಜತೆಗೆ ಬೆಂಗಳೂರಿನ ಹೊಸಮನೆಗೆ ವಾಸವಾಗಲು ಹೋಗಿದ್ದಾಗ ಆದ ಅವರ ಅನುಭವಗಳನ್ನು ಅವರದೇ ಧಾಟಿಯಲ್ಲಿ ಹೇಳುತ್ತಿದ್ದೇನೆ... ಒಂದು ದಿನ ಹೀಗೆ ಸಂಜೆ ಅಪ್ಪನಿಗಾಗಿ ಕಾಯುತ್ತ ,ಬೇಸರ ಬಂದು ರೇಡಿಯೋ ಹಾಕಿದಳು. ಆಗ ಹಳೇ ಹಾಡುಗಳು ಸಾಲಾಗಿ ಬರುತ್ತಿದ್ದವು. " ಮೆಲ್ಲುಸಿರೇ ಸವಿ ಗಾನ .... ಎದೆ ಝಲ್ಲನೇ ,ಹೂವಿನ ಬಾಣ..."ಅವಳ ಇಷ್ಟದ ಹಾಡು ಕೇಳುತ್ತಾ ಅಮ್ಮ ಮುಂದೆ ಹುಟ್ಟಲಿರುವ ತನ್ನ ಕಂದನಿಗಾಗಿ (ನಾನೇ!)ಸ್ವೆಟರ್ ಹೊಲೆಯುತ್ತಿದ್ದಳು...ಅಮ್ಮ ತನ್ನ ಇಷ್ಟದ ವಸ್ತುಗಳಾದ ತನ್ನ ಫೋಟೋ-ಗಳನ್ನು, ಜೋಪಾನವಾಗಿ ರೂಮಿನ ಕಿಟಕಿಯ ಬಳಿ ಇಡುತ್ತಿದ್ದಳು.ಅಪ್ಪ ಬರುವುದನ್ನು ಕಾಯುತ್ತ ಕೂತಿರುತ್ತಿದ್ದಳು..ಅವರ ಮನೆ ಪಕ್ಕದವರು ಯಾರೋ ಗೊತ್ತಿಲ್ಲ,ಬಾಗಿಲು ತೆಗೆದು ಹೊರ ಬರುವುದೇ ಇಲ್ಲವಲ್ಲ... ಒಂದು ದಿನ ಕೂಡ ಅವರು ಕಾಣಿಸಿರಲಿಲ್ಲ.ಅಮ್ಮನಿಗೆ ಅಲ್ಲಿ ಹೋಗಿ ನೋಡುವ ಕುತೂಹಲ.ಅಪ್ಪನಿಗೆ ಹೇಳಿದಾಗ ಅಪ್ಪ ಅವಳಿಗೆ ಅಲ್ಲಿಗೆ ಹೋಗಬಾರದೆಂದು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು...ಅಮ್ಮ ನನ್ನ ಹಾಗೇ, ಅತೀ ಬುದ್ಧಿ ..ನೋಡಿಯೇಬಿಡೋಣ ಅಂದುಕೊಂಡು ಕುತೂಹಲದಿಂದ ಮರುದಿನ ಆ ಮನೆಗೆ ಹೋದಳು.. ಸುಮಾರು ೫೦ ವರ್ಷ ಹಳೆಯದಾದ ಮನೆ ಅದು.ಮನೆಯ ಸುತ್ತಲೂ ಎತ್ತರಕ್ಕೆ ನಿಲ್ಲಿಸಿದ, ಬಣ್ಣ ಮಾಸಿದ ಕಂಬಗಳು.ಅಮ್ಮ ಧೈರ್ಯ ಮಾಡಿ ಒಳಗೆ ಹೋದಳು ... ಅವಳನ್ನು ಸ್ವಾಗತಿಸಿದ್ದು ಸುಮಾರು ೮೦-೯೦ ವಯಸಿನ ಒಬ್ಬ ಮುದುಕಿ. ನೋಡಲು ಗಟ್ಟಿ-ಮುಟ್ಟಾಗಿದ್ದಳು..ಹಲ್ಲುಗಳು ಬಿದ್ದುಹೋಗಿ ನಕ್ಕರೆ ವಿಕಾರವಾಗಿ ಕಾಣುತ್ತಿದ್ದಳು."ಏನು ಇಲ್ಲಿ ಬಂದಿರಿ!?" ಮುದುಕಿಯ ಪ್ರಶ್ನೆ ಕೇಳಿ ಸ್ವಲ್ಪ ಭಯಭೀತಳಾದ ಅಮ್ಮ "ನಾವು ನಿಮ್ಮ ನೆರೆಮನೆಗೆ ಹೊಸದಾಗಿ ಬಂದಿದ್ದೇವೆ..ನಿಮ್ಮನ್ನು ಮಾತನಾಡುವ ಸಲುವಾಗಿ ಹಾಗು ನಾಳೆ ನಮ್ಮ ಮನೆಯ ಪೂಜೆ ಇದೆ, ಕರೆದು ಹೋಗೋಣವೆಂದು ಬಂದೆ" ಅಂದಳು ... ಅವಳ ಮುಖದಲ್ಲಿ ಕಂಡುಬಂದ ಆತಂಕ ಅರಿತು ಮುದುಕಿ ಮನೆಯ ಒಳಗೆ ಕರೆದು, ಮಾತಾಡಿಸಿ, ಕುಂಕುಮ ಕೊಟ್ಟು ಕಳುಹಿಸಿದಳು..ಅಮ್ಮನಿಗೆ ಮನೆಗೆ ಬಂದ ನಂತರ ಅದೇಕೋ ಸುಸ್ತು, ವಾಂತಿ ಹಾಗೂ ವಿಪರೀತ ಜ್ವರ ...ಅವತ್ತು ಶನಿವಾರವಾದ್ದರಿಂದ ಅಪ್ಪ ಬೇಗ ಮನೆಗೆ ಬಂದರು.. ಅಮ್ಮ ನರಳುತ್ತಾ ಇದ್ದದ್ದನ್ನು ಕಂಡು ಡಾಕ್ಟರ್'ರ ಬಳಿ ಕರೆದುಕೊಂಡು ಹೋದಾಗ ತಿಳಿದು ಬಂತು ಅಮ್ಮ ಎರಡು- ತಿಂಗಳ ಗರ್ಭಿಣಿ. ಅವಳ ಆರೈಕೆ ಮಾಡಲು ಯಾರೂ ಇಲ್ಲದಿರುವುದು ಅಮ್ಮನಿಗೆ ಮನಸ್ಸಿಗೆ ನೋವಾಗಿತ್ತು.. ತನ್ನ ಗಂಡ ಇಂತಹ ಸಮಯದಲ್ಲಿ ತನ್ನ ಜತೆಗೇ ಇರಬೇಕು ಅನಿಸುತ್ತಿದ್ದರೂ, ಅವರ ಕೆಲಸದಿಂದಾಗಿ ಅದು ಸಾಧ್ಯವಿಲ್ಲ ಎಂದು ಸುಮ್ಮನಿದ್ದಳು... ನೆರೆಮನೆಯ ಮುದುಕಿ ಆಗಾಗ ಬಂದು ಅಮ್ಮನ ಆರೋಗ್ಯ ವಿಚಾರಿಸಿ, ಅವಳ ಜೊತೆ ಇದ್ದು ಹೋಗುತ್ತಿದ್ದಳಂತೆ.ಈ ವಿಷಯ ಅಪ್ಪನಿಗೆ ಗೊತ್ತಿಲ್ಲ..ಒಂದು ದಿನ ಬೆಂಗಳೂರಿನಲ್ಲೇ ಇರುವ ಮಾವ(ಅಮ್ಮನ ಸ್ವಂತ ತಮ್ಮ) ಅಕ್ಕನನ್ನು ನೋಡಿಕೊಂಡು ಹೋಗಲು ಬಂದನು. ಆಗ ಮನೆಯಲ್ಲಿ ಅಮ್ಮನ ಜೊತೆ ಆ ಮುದುಕಿ ಕೂಡ ಇದ್ದಳು.. ಆಕೆ ಏನನ್ನೋ ಅಮ್ಮನಿಗೆ ತಿನ್ನಲು ಕೊಡುತ್ತಿದ್ದಳು ... ಮಾವ ಅದನ್ನು ನೋಡಿ ಗಾಬರಿಯಾಗಿಅಪ್ಪನ ಆಫೀಸ್ ಹುಡುಕಿಕೊಂಡು ಹೋಗಿ, ಅಪ್ಪನಿಗೆ ತಕ್ಷಣ ಎಲ್ಲಾ ವಿಷಯ ಹೇಳಿದಾಗ ಮನೆಗೇ ಬಂದು ಅಪ್ಪ ಆ ಮುದುಕಿಗೂ,ಅಮ್ಮನಿಗೂ ಬೈದು ಮತ್ತೆ ಯಾವತ್ತೂ ಆಕೆ ಮನೆಗೆ ಬರಬಾರದೆಂದು ಹೇಳಿದರು..ಕಾರಣ ಆ ಮುದುಕಿ ಒಬ್ಬಳು ಮಾಟಗಾತಿ.. ಆಕೆಗೆ ಮಕ್ಕಳಾಗುವುದಿಲ್ಲ ಎಂದು ಅವಳ ಗಂಡ ಬೇರೆ ಹೆಂಗಸನ್ನು ಮದುವೆ ಮಾಡಿಕೊಂಡು ಇವಳನ್ನು ಬಿಟ್ಟು ಹೋದನಂತೆ... ಅಂದಿನಿಂದ ಈಕೆಗೆ ಯಾರಾದರೂ ಪುಟ್ಟ ಮಕ್ಕಳು ಕಂಡರೆ, ಅವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ ಅವರನ್ನು ಬಲಿಕೊಡುತ್ತಿದ್ದಳಂತೆ..ಅದು ಸಾಧ್ಯವಿಲ್ಲ ಎಂದಾದರೆ ಗರ್ಭದಲ್ಲಿಯೇ ಮಗು ಸಾಯುವಂತೆ ಮದ್ದು ಮಾಡಿ ತಿನಿಸುತ್ತಿದ್ದಳಂತೆ.. ಆ ಹೆಂಗಸಿನ ಮಾನಸಿಕ ಸ್ಥಿತಿ ಸರಿಯಾಗಿ ಇಲ್ಲವೆಂದು, ಎಲ್ಲರೂ ಅವರ ಮಕ್ಕಳನ್ನು ಜೋಪಾನ ನೋಡಿಕೊಳ್ಳುತ್ತಿದ್ದರು... ಆ ಜಾಗಕ್ಕೆ ಹೊಸದಾಗಿ ಬಂದವರಿಗೆ ಹೇಗೆ ಗೊತ್ತಾಗಬೇಕು..!! ಅಂದು ಮಾವ ಬರದೇ ಹೋಗಿದ್ದರೆ, ಆ ಮುದುಕಿ ಅಮ್ಮನಿಗೆ ಏನನ್ನೋ ತಿನಿಸಿ ಅವಳಿಗೆ ಗರ್ಭಪಾತ ಮಾಡಿಸಿಬಿಡುತ್ತಿದ್ದಳು... ಆ ಘಟನೆ ನಡೆದ ನಂತರ ಅಮ್ಮ ಬಹಳ ಎಚ್ಚರಿಕೆಯಿಂದ ಇರುತ್ತಾಳೆ..ನನಗೂ ಹೀಗೆ ಆಕಸ್ಮಿಕವಾಗಿ ಪರಿಚಯವಾದ ಒಬ್ಬಳು ಹೆಂಗಸನ್ನು ಮನೆಗೆ ಬರಲು ಹೇಳಿದ್ದೆ.. ಆದರೆ ಆಕೆ ಕೆಟ್ಟ ಹೆಂಗಸಲ್ಲ..ಒಳ್ಳೆಯ ಹಾಗೂ ತನ್ನ ಗಂಡ ,ಮಕ್ಕಳ ಜೊತೆ ಬಾಳುತ್ತಿರುವಾಕೆ..
ಅಮ್ಮನಿಗೆ ಅಂದು ನಡೆದ ಘಟನೆ ಮತ್ತೆ ನಡೆದುಹೋದೀತು ಎಂಬ ಭಯ ... ಯಾವಾಗಲೂ ಹೇಳುತ್ತಿದ್ದಳು "ಯಾರನ್ನೂ ಹೀಗೇ ಎಂದು ಹೇಳಲಾಗದು .."
ಆ ಭಯದ ಹಿಂದೆ ಹೀಗೊಂದು ಭೀಕರ ನೆನಪು ಇದೆ ಎಂದು ನನಗೆ ಗೊತ್ತಿರಲಿಲ್ಲ ... "ಆ ಮಾಟಗಾತಿ ಮುದುಕಿ, ನನ್ನಂತೆಯೇ ಅದೆಷ್ಟು ಮುಗ್ಧೆಯರನ್ನು ಮರಳುಮಾಡಿ, ಅವರ ಮಕ್ಕಳನ್ನು ಕೊಂದಿದ್ದಾಳೋ....
ನೆನೆದರೆ ಈಗಲೂ ಮೈ ಝಮ್ ಎನಿಸುತ್ತದೆ" ಅನ್ನುತ್ತಾಳೆ ಅಮ್ಮ..

Monday, June 8, 2015

ಸುಸ್ವರ

ಸುಸ್ವರ
"ಅವನ ಜತೆ ಮಾತನಾಡಲು ಬಹಳ ದಿನಗಳಿಂದ ಕಾಯುತ್ತಿದ್ದೆ.. ಈ ದಿನ ಹೇಗಾದರೂ ಅವನ ಜತೆ ಮಾತಾಡಿ ಅವನಲ್ಲಿ ನನ್ನ ಮನಸಿನ ಮಾತು ಹೇಳಿಕೊಳ್ಳಬೇಕು..." ಪ್ರಿಯಾ ತನ್ನ ಗೆಳತಿ ವರ್ಷಾಳ ಬಳಿ ಹೇಳುತ್ತಿದ್ದಳು... ವರ್ಷಳಿಗೆ ಗೊತ್ತು, ಪ್ರಿಯಾ ಯಾರನ್ನು ಪ್ರೀತಿಸುತ್ತಾಳೆಂದು. ಆದರೆ ಪ್ರಿಯಾ ಮುದ್ದು -ಮುದ್ದಾಗಿ ನಾಚುತ್ತ, ಅವನ ಬಗ್ಗೆ ಹೇಳುವಾಗ ವರ್ಷಾ ಮನದಲ್ಲಿ ನಗುತ್ತಿದ್ದಳು.
ಪ್ರತಿ ದಿನ ಅವನ ಮೆಸ್ಸೇಜಿಗಾಗಿ ಕಾಯುತ್ತಿದ್ದ ಪ್ರಿಯಾಳಿಗೆ ಪ್ರತಿಸಲ ಅವನು ಲೇಟಾಗಿ ಮೆಸೇಜ್ ಮಾಡಿದಷ್ಟೂ ಬೇಸರವಾಗುತ್ತಿತ್ತು...ಅವನಿಗಂತೂ ಅರ್ಥ ಆಗಲ್ಲ.. ಸರಿ...ಇವನನ್ನು ಭೇಟಿ ಮಾಡಿ ಹೇಳಿ ಬಿಡ್ಲಾ :( ಆದರೆ ಅವನು ಇದೇ ವಾರ ವಾಪಾಸು ಹೋಗುವವನಿದ್ದಾನೆ .. ಪ್ರಿಯಾ ಯೋಚಿಸುತ್ತಾ ತನ್ನ ಡೈರಿಯಲ್ಲಿ ಬರೆಯತೊಡಗಿದಳು...
---- ಪ್ರೀತಿ' ಎಂಬ ಎರಡೂವರೆ ಅಕ್ಷರವನ್ನು ನಿರೂಪಿಸುವುದು ಬಹಳ ಕಷ್ಟ. ಯಾಕೆಂದರೆ ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯ ಇಲ್ಲ. ಅದೇನೇ ಇದ್ದರೂ ಅದನ್ನು ಅನುಭವಿಸಿಯೇ ತೀರಬೇಕು. ಅದರಲ್ಲೂ ನಿಜವಾದ ಪ್ರೀತಿ ಅಂದರೆ ಯಾವುದು? ನಿಜವಾದ ಪ್ರೀತಿ ಅಂದರೇನು? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ, ಮನದಲ್ಲಿ ಮೂಡುವುದು ಸಹಜ. ನಿಜವಾದ ಪ್ರೀತಿ ಅನ್ನೋದು ಹೃದಯದ ಬಡಿತ ಅಲ್ಲ. ನನ್ನ ಹೃದಯ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ನಿಜವೂ ಅಲ್ಲ. ನಿಜವಾದ ಪ್ರೀತಿ ಅನ್ನೋದು ವ್ಯಕ್ತಿಯನ್ನು ಪರಿಪೂರ್ಣಗೊಳಿಸುತ್ತದೆ. ಒಳ್ಳೆಯದು, ಕೆಟ್ಟದ್ದು ಎಲ್ಲವನ್ನೂ ಒಳಗೊಂಡಿದೆ. ನನ್ನವನು ನಾನು ಪ್ರೀತಿ ಹೇಳಿಕೊಳ್ಳುವ ಮೊದಲೇ ತನ್ನ ಊರಿಗೆ ಹೊರಟುಹೋದ.. ಅವನ ಅಮ್ಮ-ಅಪ್ಪ ಮಾತ್ರ ಇಲ್ಲಿಯೇ ಇದ್ದಾರೆ. ನನ್ನ ಬಳಿಯಿರುವುದು ಅವನ ಮಾತಿನ,ನಗುವಿನ ಹಾಗೂ ತರಲೆಗಳ ನೆನಪು. ಅವನು ಇಲ್ಲಿಲ್ಲ... ಆದರೆ ಇಲ್ಲವೆಂದು ಅನಿಸುತ್ತಿಲ್ಲ. ನನ್ನೆಲ್ಲಾ ಕನಸುಗಳಲ್ಲಿ ಅವನು ಇದ್ದಾನೆ... ಪ್ರೀತಿ ಅಂದ್ರೆ ಏನು? ಅವನ್ನೆಲ್ಲ ಹೇಳಬಾರದು, ಅನುಭವಿಸಬೇಕು. ಪ್ರೀತಿ ಅಂದ್ರೆ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕಬಾರದು. ಯಾಕೆಂದರೆ ಉತ್ತರ ಬೇರೆಯವರಿಂದ ಕೇಳಿ ತಿಳಿಯುವುದಲ್ಲ...ನಾವೇ ಅರಿತುಕೊಳ್ಳಲು ಪ್ರಯತ್ನಿಸಬೇಕು..--- ಅವನು ಮರಳಿ-ಬರುವವರೆಗೆ ನನ್ನ ಡೈರಿಗೆ ಏನೂ ಕೆಲಸವಿಲ್ಲ ಅಂದುಕೊಂಡು ಡೈರಿಯನ್ನು ಮುಚ್ಚಿಟ್ಟಳು