Wednesday, January 21, 2015

ಹಿತ

ಓ ಮಂಜಿನ ಹನಿಯೇ, ನೀನೆಷ್ಟು ಸುಂದರ... ನೀನಿರುವೆ ಎಲೆಗಳ ಮೇಲೆ ... ಮುತ್ತುಗಳ ಪೋಣಿಸಿದ ರೀತಿ. ನನ್ನ ಕೊರಳ ಅಲಂಕರಿಸಿದ ಈ ಮುತ್ತಿನ ಹಾರಕ್ಕಿಂತ ನೀನು ಬಳಿ ಇರುವುದೇ ನನಗೆ ಹಿತ...

Monday, January 19, 2015

ಸಂಗಾತಿ

ಮೋಹಕ ಮುಗುಳ್ನಗೆಗೆ ಸೋಲುತಿದೆ ಮನ,
ಬೆಚ್ಚನೆ ಸಿಹಿ ಅಪ್ಪುಗೆಯ ಬಯಸಿದೆ ಮನ,
ಜೊತೆಗಿರಲು ನೀನು,
ಜಗವನ್ನೇ ಮರೆತೆ..
ಬೇರೇನನ್ನೂ ಬಯಸೆನು...
ನೀ ನನ್ನ ಒಡವೆ ...
ನೀ ನಗಲು ಬೃಂದಾವನ ಅರಳಿ ನಿಂತಷ್ಟೇ ಸುಂದರ..
ಕಿರಣಗಳನ್ನು ಧರೆಗೆ ಧಾರೆಯಾಗಿ ಹರಿಸಿದಂತೆ ಭಾಸ್ಕರ..
ನಿನ್ನ ಒಂದು ಹಿತಸ್ಪರ್ಷ ಚಳಿಗಾಲದಲ್ಲಿ ಬಿಸಿ ಕಾವು ಸಿಕ್ಕ ಹಾಗೆ...
ಎದೆಯಲ್ಲಿ ಕಚಗುಳಿ, ನೀನಿರಲು ನನ್ನೊಂದಿಗೆ ...

ಚಡಪಡಿಕೆ

ಸಾರಿಕಾ ನಮ್ಮ ಪಕ್ಕದ ಮನೆ ಹುಡುಗಿ.
ತುಂಬಾ ಲವಲವಿಕೆಯಿಂದ ಇದ್ದ ಇವಳು ಇಂದೇಕೋ ಕಾಲೇಜಿಗೂ ಹೋಗದೆ ಮನೆಯಲ್ಲಿ ಯಾರ ಬಳಿಯೂ ಮಾತಾಡದೆ ಸಪ್ಪಗೆ ಕೂತಿದ್ದು ಅವರಮ್ಮ, ನನ್ನ ಅಮ್ಮ ಹಾಗೂ ನಮ್ಮ ವಠಾರದ ಎಲ್ಲರಿಗೂ ಆಶ್ಚರ್ಯವಾಗಿತ್ತು. .
ಸದಾ ಪಟಪಟನೆ ಮಾತಾಡಿ, .
ಚಿಟ್ಟೆಯಂತಿದ್ದ ಅವಳು ಮೌನ ತಾಳಿದ್ದು ಅಸಹಜ ಅನಿಸುತ್ತಿತ್ತು. .
ಬೆಳಗ್ಗೆ ತಿಂಡಿಯನ್ನೂ ತಿನ್ನದೇ, ಮಧ್ಯಾಹ್ನ ಊಟ ಕೂಡ ಮಾಡದೆ ಸುಮ್ಮನೆ ರೂಮಲ್ಲಿ ಕೂತಿದ್ದಳು. .
ಗಾಬರಿಯಿಂದ ಅವಳಮ್ಮ,  ತನ್ನ ಗಂಡನಿಗೆ ಫೋನ್ ಮಾಡಿ ಬರಲು ಹೇಳಿದ್ದೂ ಆಯ್ತು. ಅವರು ಬರಬೇಕಾದರೆ ಆ ಟ್ರಾಫಿಕ್ ನ ದಾಟಿ ವಸಂತನಗರಕ್ಕೆ ಬರಲು ನಾಲ್ಕು ಗಂಟೆಗಳು ಬೇಕು. ಆಗ ಅವಳಿಗೆ ತುಂಬಾ ಆತ್ಮೀಯರಾದ ಅವಳ ಕಮಲತ್ತೆಯನ್ನು ಕರೆಸಿದರು.ಅತ್ತೆ ಇಲ್ಲೇ ಹತ್ತನೇ ಕ್ರಾಸ್ನಲ್ಲಿ ವಾಸವಾಗಿದ್ದಾರೆ. .
ಆದ್ದರಿಂದ ಬೇಗನೇ ಬರಲು ಸಾಧ್ಯವಾಯ್ತು.
ಅತ್ತೆ ಬಂದವರೆ  ರೂಮಿನಲ್ಲಿ ಒಬ್ಬಳೇ ಕೂತಿದ್ದ ಸಾರಿಕಾ ಬಳಿ ಹೋಗಿ ರೂಮ್ ಬಾಗಿಲು ಹಾಕಿಕೊಂಡರು.
ಅಂತೂ ಅರ್ಧ ಗಂಟೆ ಆದ ಮೇಲೆ ಕಮಲ ಅತ್ತೆ ಆಚೆ ಬಂದರು.
"ಏನಿಲ್ಲ ಸುಮಕ್ಕ, ಅವಳ ಮೊಬೈಲು ಹಾಳಾಗಿತ್ತಂತೆ.ರಿಪೇರಿಗೆ ಕೊಟ್ಟು ಬಂದಿದ್ದಾಳೆ  .
ಮೊಬೈಲು ಶಾಪ್ ನವನು ಇನ್ನು ಮೂರು ದಿನ ಬಿಟ್ಟು ಬನ್ನಿ ಅಂದಿದ್ದಾನೆ..
ಅಷ್ಟು ದಿನ ಹೇಗಪ್ಪ ಫೇಸ್ ಬುಕ್,ವಾಟ್ಸಾಪ್ ಎಲ್ಲ ಬಿಟ್ಟು ಇರೋದು ಅಂತ ಚಡಪಡಿಸು ತ್ತಾ ಇದ್ದಾಳೆ ಅಷ್ಟೇ "
ಅಂದಾಗ ಅಲ್ಲೇ ಇದ್ದ ನಮಗೆಲ್ಲ ನಗಬೇಕೊ,ಅಳಬೇಕೋ,  ತಲೆ ಚಚ್ಚಿಕೊಳ್ಳಬೇಕೋ ಗೊತ್ತಾಗಲಿಲ್ಲ.  .  .

Thursday, January 15, 2015

ಒಲವಿನ ಈ ಪರಿ ಎಂತು...

ಇಷ್ಟಕ್ಕೂ ಪ್ರೀತಿ ಅಂದ್ರೆ ಏನು? 
ಹೀಗೆಯೇ ನಾನು ಯೋಚಿಸುತ್ತಾ ಕುಳಿತಿದ್ದಾಗ ಅರ್ಧ ಕೆಂಪಾದ ಸೂರ್ಯ ತನ್ನ ಕೆಲಸ ಮುಗಿಸಿ ಮನೆಗೆ ಜಾರಿಕೊಳ್ಳುತ್ತಿದ್ದ.  
ನನ್ನ ಗೆಳತಿ ಕಾವ್ಯ ಆಗ ತಾನೇ ಕೋಚಿಂಗ್ ಕ್ಲಾಸಿನಿಂದ ಬಂದು ಸುಸ್ತಾಗಿ ಮಲಗಿದ್ದಳು.  
ಅವಳನ್ನು ಕೇಳಲು ಎದ್ದವಳು ಏಕೋ ಬೇಡವೆಂದು ಹಾಗೇ FM ಆನ್ ಮಾಡಿ ನನಗಿಷ್ಟದ ಕಾರ್ಯಕ್ರಮವನ್ನು ಹಾಕಿ ಬಾಲ್ಕನಿಯಲ್ಲಿ ಕುಳಿತೆ.  
FMನಲ್ಲಿ RJ ಮನಸ್ವಿ   'ನಗುವ ನಯನಾ , ಮಧುರಾ ಮೌನ.. ಮಿಡಿವ ಹೃದಯ ಇರೆ ಮಾತೇಕೆ ... '   ಹಾಡನ್ನು ಪ್ಲೇ ಮಾಡಿದ್ದಳು.  
ಆ ಹಾಡು  ಕೇಳ್ತಾ ಹೀಗೆ ಕಣ್ತುಂಬಾ ಪ್ರಶ್ನೆಗಳನ್ನಿಟ್ಟುಕೊಂಡು ಕುಳಿತುಕೊಂಡಿದ್ದಾಗ ಅಣ್ಣ ಕೊಟ್ಟ ಒಂದು ನಾವೆಲ್ ಕಿಟಕಿಯ ಬಳಿ ಧೂಳು ಹಿಡಿದು ಕೂತದ್ದನ್ನು ನೋಡಿದೆ.  
ಅದೆಷ್ಟು ಸಮಯವಾಯಿತು ಒಂದು ಒಳ್ಳೆಯ ಪುಸ್ತಕ ಓದದೇ... ಪುಸ್ತಕ ತೆಗೆದು ಕಣ್ಣಾಡಿಸಿದರೆ  
" ಪ್ರೀತಿಯೆಂದರೆ ಅಮೃತ"    ಅಂತಿತ್ತು.
ಹಾಗಾದರೆ ಕೆಲವರು ಪ್ರೀತಿ ಕೈಕೊಟ್ಟಾಗ ಯಾಕೆ ವಿಷ ತೆಗೆದುಕೊಳ್ಳುತ್ತಾರೆ? "ಪ್ರೀತಿಯೆಂದರೆ ಗೆಲುವು" 
"ಪ್ರೀತಿಯೆಂದರೆ ದೇವರು"   
"ಪ್ರೀತಿಯೆಂದರೆ ಕನಸು"      
"ಪ್ರೀತಿಯೆಂದರೆ ಭರವಸೆ "

ನಿಜಕ್ಕೂ ಈ ಪ್ರೀತಿ ಎಂದರೇನು?   ಎಂಬ ಪ್ರಶ್ನೆ ಮಾತ್ರ ಭೂತವಾಗಿ ನನ್ನೆದುರು ನಿಂತಿದೆ,   ಕಾಡುತಿದೆ..  
ಪ್ರೀತಿ ಅಂದರೆ ಋಣವಾ?  
ನಾನು ನೀನಿತ್ತ ಪ್ರೀತಿ-  ಸಾಲವನ್ನು ವಾಪಸು ಮಾಡಿದ ನಂತರ ಏನೂ ಉಳಿಯವುದಿಲ್ವಾ...  
ಹೇಗೆ ಯೋಚಿಸಿ ನೋಡಿದರೂ ಉತ್ತರ ಹೊಳೆಯುತ್ತಿಲ್ಲ..   
ಎಷ್ಟು ಕನಸುಗಳು ಕಂಡದ್ದನ್ನು ಮರೆಸಿಕೊಂಡು ಹೊಸ ಅರ್ಥ ನೀಡುವ ಪ್ರೀತಿ ಒಮ್ಮೆ ಸುಲಭ ಒಮ್ಮೊಮ್ಮೆ ಕಠಿಣ....  
ಅರ್ಥವೇ ಆಗದ ಅಸ್ಪಷ್ಟ ದೃಶ್ಯದಂತೆ...ಈ ದಾರಿಯಲ್ಲಿ ನನ್ನನ್ನು ನೀನು, ನಿನ್ನನ್ನು ನಾನು ಕೈ ಬಿಡದೆ ಕಾಯೋಣ ..  
ನಮ್ಮ ಪುಟ್ಟ ಜಗತ್ತಲ್ಲಿ ನಮ್ಮದೇ ರೀತಿಯಲ್ಲಿ ಖುಷಿಯಿಂದ ಬಾಳುವ ನನ್ನಾಸೆಗೆ ನೀನೇ ಆಸರೆ.

Wednesday, January 14, 2015

ಅಕ್ಕ

"ನಮ್ಮ ಸಂಗೀತ ಇದೇ ಊರಿನಲ್ಲಿ ಟೀಚರ್ ಕೆಲಸ ಹುಡುಕಿಕೊಂಡು ಬಂದಿದ್ದಾಳಂತೆ ಕಣೇ ಶಾರದಾ.. ನಾನೇ ಇಂದು ರೇಷನ್ ಅಂಗಡಿ ಬಳಿ ಅವಳನ್ನು ನೋಡಿದೆ.. "
ಅಪ್ಪ ಅಮ್ಮನ ಬಳಿ ಹೇಳುತ್ತಿದ್ದರು.
ನನಗೆ ಆದ ಸಂತಸಕ್ಕೆ ಪಾರವೇ ಇಲ್ಲ. ನನ್ನ ಅಮ್ಮ ಏನೆಂದಳೋ ಗೊತ್ತಿಲ್ಲ..
ಆದರೆ ನಾನಂತೂ ಅವಳನ್ನು ಧಿಕ್ಕರಿಸಿಯಾದರೂ , ಸಂಗೀತ ಅಕ್ಕನನ್ನು ಕಾಣಲು ಹೋಗುತ್ತೇನೆ.
~~~~~~~~~~~~~~~~~~
ಸುಮಾರು ಎಂಟು ವರ್ಷದ ಹಿಂದೆ ಸಂಗೀತಾಳ ಮದುವೆಯಾಗಿತ್ತು.
ಬಡ ಹುಡುಗ ರಮೇಶ್ ನೋಡುವುದಕ್ಕೆ ಅತಿ ಸುಂದರನಾದರೂ, ಬಡವ ಹಾಗೂ ಅನಾಥನಾಗಿದ್ದ.
ಅವನ ಜೀವನದಲ್ಲಿ ಮದುವೆಯ ಕನಸುಗಳು ಸಾವಿರ ಸಲ ಬಂದಿದ್ದರೂ ಬಡತನದ ಸಲುವಾಗಿ ಆತ ಯಾವ ಹುಡುಗಿಗೂ ಹಿಡಿಸಲೇ ಇಲ್ಲ.
ಕೊನೆಗೆ ಅವನ ದೂರದ ಸಂಬಂಧಿಯಾದ ನಮ್ಮ ಮಾವನೇ ಅವರ ಮಗಳು ವನಜಳನ್ನು ಹೇಗೋ
ಒಪ್ಪಿಸಿ ಮದುವೆಯ ಸಿದ್ಧತೆ ನಡೆಸಿದರು. ಮದುವೆಯ ದಿನವೇ ಎಲ್ಲಾರಿಗೂ ಕೈಕೊಟ್ಟು ವನಜಾ ಬಾಳೆಮಂಡಿಯ ಕೆಲಸದ ಹುಡುಗನ ಜೊತೆ ಓಡಿಹೋಗಿದ್ದಳು.
ನನಗೆ ಆಗ ಹದಿನೆಂಟು ವರ್ಷ ಇನ್ನು ತುಂಬಿರಲಿಲ್ಲ.. ಆದ್ದರಿಂದ ,ಮಾವನ ಮರ್ಯಾದೆ ಉಳಿಸಲೆಂದು ನಮ್ಮಕ್ಕ ಸಂಗೀತಾಳನ್ನು ರಮೇಶನ ಜತೆ ಮದುವೆ ಮಾಡಿಬಿಟ್ಟರು.
ಅಕ್ಕ ಪಾಪದವಳು.
ತಾನಾಯಿತು, ತನ್ನ ಕೆಲಸವಾಯಿತು ಎಂದು ತೆಪ್ಪಗೆ ಇದ್ದುಬಿಡುವಳು. ನಾನೋ,ಬಹಳ ಚೂಟಿ, ಜೋರೆಂದು ಎಲ್ಲರೂ ಹೇಳುತ್ತಿದ್ದರು. ಅಕ್ಕನಿಗೆ ಓದು ಮುಂದುವರೆಸಲಾಗಲಿಲ್ಲ. ರಮೇಶ, ಬೆಂಗಳೂರಿನಲ್ಲಿ ಒಂದು ಸಣ್ಣ ಹೋಟೆಲ್ ನಲ್ಲಿ ಮಾನೇಜರ್ ಆಗಿದ್ದ.. ಕಡಿಮೆ ಸಂಬಳವಾದರೂ ಇಬ್ಬರಿರುವ ಮನೆಗೆ ಸಾಕೆನಿಸುತ್ತಿತ್ತು.
ಅಕ್ಕ ಮನೆಗೆಲಸ ಮಾಡಿ ,ಗಂಡನ ಬೇಕು-ಬೇಡಗಳನ್ನು ನೋಡಿಕೊಳ್ಳಬೇಕಿತ್ತು.
ಅತ್ತೆ,ಮಾವ ಇಲ್ಲದ ಮನೆ ಆಕೆಗೆ ಬೇಸರವೆನಿಸಿತ್ತು.
ಅದಕ್ಕೇ ತವರಿಗೆ ಆಗಾಗ ಬಂದು ನಮ್ಮನ್ನೆಲ್ಲ ಮಾತಾಡಿಸಿ ಹೋಗುತ್ತಿದ್ದಳು. ನಮ್ಮೂರಿಗೆ ಆಗ ಟ್ರೈನ್'ಗಳು ಅಷ್ಟಾಗಿ ಇರಲಿಲ್ಲ..
ಅದಕ್ಕಾಗಿಯೇ ಅಕ್ಕ ಸದಾ ನಮಗೆ ಪತ್ರ ಬರೆದು ವಿಷಯ ತಿಳಿಸುತ್ತಿದ್ದಳು..
ಆದರೆ ಅಕ್ಕ ಈ ಬಾರಿ ಬಂದು ಹೋದ ಮೇಲೆ ಮೂರು ತಿಂಗಳ ನಂತರವೂ ಪತ್ರ ಬರೆಯಲೇ ಇಲ್ಲ. ನನ್ನ ತಂದೆಯವರು ಪೌರೋಹಿತ್ಯ ಮಾಡುತ್ತ ಜೀವನ ಸಾಗಿಸುತ್ತಾರೆ..
ಅಮ್ಮ ಮನೆಯಲ್ಲೇ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾಳೆ.
ಹಾಗೇನೂ ಸ್ಥಿತಿವಂತರಲ್ಲ ಆದರೂ ಉಣಲು,ಉಡಲು ಏನೂ ಕೊರತೆ ಇರಲಿಲ್ಲ.
ನಾವು ಆಕಳು, ಕುರಿ ಇತರೇ ಸಾಕಿದ್ದರಿಂದ ಮನೆ ಸ್ವಲ್ಪ ಸಮೃದ್ಧತೆಯಿಂದ ಕೂಡಿತ್ತು.
ಅಕ್ಕ ಬಂದಾಗಲೆಲ್ಲ ತರುತ್ತಿದ್ದ ತಿನಿಸುಗಳಿಗಾಗಿ ಕಾಯುವುದೇ ನನ್ನ ಕಾಯಕವಾಗಿತ್ತು.
ನಾನಾಗ ಪಟ್ಟಣವನ್ನೇ ಒಮ್ಮೆಯೂ ನೋಡಿರಲಿಲ್ಲ..ನನಗೆ ಅಲ್ಲಿ ವಾತಾವರಣ, ಜನರು, ಉಡುಗೆ-ತೊಡುಗೆ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಿದ್ದೇ ಅಕ್ಕನು ಬರೆದ ಪತ್ರಗಳಿಂದ.
ಆದರೆ ಮೂರು ತಿಂಗಳಾದರೂ ಅಕ್ಕ ಒಂದೂ ಪತ್ರ ಬರೆಯದೆ ಇದ್ದದ್ದು ನನಗೆ ಅತ್ಯಂತ ಬೇಸರ ಉಂಟುಮಾಡಿತು.
ಅಪ್ಪ ಕಾಳಜಿ ವಹಿಸುವುದಲ್ಲ ಅಂತಲ್ಲ.
ಅವರು ಗಮನ ಕೊಡುತ್ತಿರಲಿಲ್ಲ ..
ಅಂತೂ ಅವರನ್ನು ಒಪ್ಪಿಸಿ ಬೆಂಗಳೂರಿಗೆ ಹೋಗುವಂತೆ ಮಾಡಿದಳು ಅಮ್ಮ.
ಬೆಂಗಳೂರಿಗೆ ಹೋದಾಗ ಅಪ್ಪನಿಗೆ ತಿಳಿದದ್ದು ಏನೆಂದರೆ ಅಕ್ಕ ಗರ್ಭಿಣಿ ಎಂದು.
ಆಕೆಗೆ ರಮೇಶ ತುಂಬಾ ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿದ್ದನಂತೆ.
ನಾಲ್ಕಾರು ದಿನ ಮನೆಗೇ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಅಸಹ್ಯವಾಗಿ ನಡೆದುಕೊಂಡ ...
ಅಯ್ಯೋ, ಗರ್ಭಿಣಿ ಹೆಂಗಸು, ಒಬ್ಬಳೇ ಏನು ಮಾಡಿಯಾಳು..
ದೂರದ ಊರಿಗೆ ಬೇರೆ ಮತ್ತೆ-ಮತ್ತೆ ಹೋಗಿ ಬರಲಾಗದು.
ಅಪ್ಪ ತಡಮಾಡದೆ ಅಕ್ಕನನ್ನು ಕರೆದುಕೊಂಡು ಅದೇ ರಾತ್ರಿ ಬಸ್ಸಿನಲ್ಲಿ ಆಗದೆಂದು ಸಾವಿರದ ಎಂಟುನೂರು ರೂಪಾಯಿ ಬಾಡಿಗೆ ಕೊಟ್ಟು ಟ್ಯಾಕ್ಸಿ ಮಾಡಿಕೊಂಡು ಬಂದುಬಿಟ್ಟರು.
ಪಾಪಿ ಆ ನೀಚ ರಮೇಶ, ನನ್ನ ಅಕ್ಕನನ್ನು ಮೈತುಂಬ ಬಾಸುಂಡೆ ಬರುವಂತೆ ಹೊಡೆದಿದ್ದ. ಆಗ ಎಲ್ಲರಿಗಿಂತ ನನಗೆ ಕೋಪವು ನೆತ್ತಿಗೇರಿತ್ತು. ಮುಗ್ಧ ಹುಡುಗಿಯನ್ನು ಪ್ರೀತಿ, ಕಳಕಳಿಯಿಂದ ನೋಡಿಕೊಳ್ಳದೆ ಅವಳನ್ನು ಹಿಂಸೆಗೆ ಗುರಿಮಾಡುವ ಗಂಡುಗಳು ಹುಟ್ಟುತ್ತಲೇ ಸತ್ತುಹೋಗಬಾರದೇ ಎನಿಸಿತು. ಗಂಡುಮಕ್ಕಳ ಮೇಲೇ ನನಗರಿವಿಲ್ಲದೇ ಅಸಹ್ಯ ಭಾವನೆ ಬಂದುಬಿಟ್ಟಿತ್ತು. ಅಕ್ಕ, ನಮ್ಮ ಮನೆಯಲ್ಲೇ ಇದ್ದರೂ ನೆಮ್ಮದಿ ಕಾಣಲಿಲ್ಲ . ಆ ಪಾಪಿ, ಇಲ್ಲಿಗೇ ಬಂದ. ಕಿರುಚಾಟ ನಡೆಸಿ ನಮ್ಮ ತಂದೆಯ ಮಾನವನ್ನು ಹರಾಜು ಹಾಕಿದ. ಅಕ್ಕನ ಶೀಲದ ಬಗ್ಗೆ ಕೆಟ್ಟ ಮಾತಾಡಿದ್ದಲ್ಲದೆ ನನ್ನ ಕಡೆಗೂ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ.. ಊರಿನ ಜನ ಸೇರಿ ತೀರ್ಮಾನ ಮಾಡಿ ಅಕ್ಕ ಬಾಣಂತನಕ್ಕೆ ಇಲ್ಲಿ ಬರುವುದಾಗಿಯೂ, ಸಧ್ಯಕ್ಕೆ ಅವಳು ಗಂಡನ ಜೊತೆ ಅವಳ ಮನೆಗೆ ಹೋಗಬೇಕಾಗಿಯೂ ಹೇಳಿಬಿಟ್ಟರು. ನಮಗಂತೂ ಆದ ಸಂಕಟ ಅಷ್ಟಿಷ್ಟಲ್ಲ.. ಪಾಪದ ಅಕ್ಕ ಹೆದರುತ್ತಲೇ ಅವನ ಜೊತೆ ಹೊರಟಳು. ಅಂದು ಊರವರ ನ್ಯಾಯ ಕೇಳದಿದ್ದರೆ ನಮ್ಮ ಅಕ್ಕನ ಮಗು ಉಳಿಯುತ್ತಿತ್ತು.. ಅಲ್ಲಿ ಹೋದ ಮೇಲೆ ಆದದ್ದೇ ಇದು.. ಆ ಪಾಪಿ, ಅಕ್ಕನು ಗಂಡು ಹೆರುತ್ತಾಳೆಂದು ಸಂಭ್ರಮದಿಂದ ಅವಳ ಉಪಚಾರ ಮಾಡಿ, ಹೂವಂತೆ ನೋಡಿಕೊಂಡ. ಆದರೆ , ಲಂಚ ಕೊಟ್ಟು ವೈದ್ಯರನ್ನು ಕೇಳಿದಾಗ ಗೊತ್ತಾದ ವಿಷಯ ಅದು ಹೆಣ್ಣು ಭ್ರೂಣ ... ಅಂದೇ ಅವಳನ್ನು ಆಸ್ಪತ್ರೆಗೆ ,ಚಿಕಿತ್ಸೆಗೆಂದು ಸುಳ್ಳು ಹೇಳಿ ಕರೆದುಕೊಂಡು ಹೋದ. ಡಾಕ್ಟರ್ ಇವನಿಂದ ಹಣ ಪಡೆದುಕೊಂಡು, ಅವಳ ಜ್ಞಾನ ತಪ್ಪಿಸಿದರು.
ಆಗಲೇ ಆರು ತಿಂಗಳಾದ್ದರಿಂದ ಮಗುವನ್ನು ಕೊಲ್ಲಲಾಗದೇ ಆಪರೇಶನ್ ಮಾಡಿ ಹೊರತೆಗೆದರು. ಆಗ ರಮೇಶನು, ಯಾರಿಗೂ ತಿಳಿಯದಂತೆ ಮಗುವಿನ ಪ್ರಾಣ ತೆಗೆದುಬಿಟ್ಟನು ... ಆ ಏನೂ ಅರಿಯದ ಕಂದ, ಕಣ್ಣುಬಿಡುತ್ತಲೇ ಸಾಯುವಂತಾಯಿತು.
ಜಗದಲ್ಲಿ ಎಷ್ಟೋ ಜನರು ಮಗುವಿನ ಅಳು ಕೇಳಲು,ತಮ್ಮ ಮಡಿಲಲ್ಲಿ ಮಲಗಿಸಿ ಆಡಿಸಲು ಕಾತರದಿಂದ ಕಾಯುತ್ತಾರೆ..
ಆದರೆ ಇಲ್ಲಿ ಆ ಪುಟ್ಟ ಜೀವಕ್ಕೇ ಬೆಲೆ ಇಲ್ಲದಾಗಿತ್ತು. ಅಕ್ಕನಿಗೆ ಎಚ್ಚರವಾದಾಗ ಅವಳ ಹೊಟ್ಟೆ ಬರಿದಾಗಿತ್ತು. ಅವಳ ಹೃದಯ ಮಾತ್ರ ದು:ಖದಿಂದ ಭಾರವಾಗಿತ್ತು.
ಬಹುಶಃ ಅವಳಿಗೆ ಗೊತ್ತಿತ್ತೇನೋ..
. ತನ್ನ ಮುದ್ದು ಕಂದಮ್ಮ ಚಿರನಿದ್ರೆಗೆ ಜಾರಿದೆ ಎಂದು. ಅವಳು ಅಳಲಿಲ್ಲ. ಕಿರುಚಲಿಲ್ಲ. ನಕ್ಕಳು.. ಅಷ್ಟೇ ಅವಳು ಮಗುವನ್ನು ಕಳೆದುಕೊಂಡು ಹುಚ್ಚಿ ಆದಳೆಂದು ಪಾಪಿ ರಮೇಶ ಎಲ್ಲರ ಬಾಯಿ ಮುಚ್ಚಿಸಿದ..
~~~~~~~~~~~~~~~~~
ಅಂದು ಆಸ್ಪತ್ರೆಯಿಂದ ಓಡಿಹೋದ ಸಂಗೀತಕ್ಕ ಈಗ ನಮ್ಮೂರಿನ ಹೈಸ್ಕೂಲ್ಗೆ ಮಾಥ್ಸ್ ಟೀಚರಾಗಿ ಬಂದಾಗ ಅಮ್ಮ ನಂಬಲೇ ಇಲ್ಲ.
ಅಪ್ಪನ ಮನಸ್ಸು ಅವಳೇ ನಮ್ಮ ಸಂಗೀತಾ ಎನ್ನುತಿತ್ತು.
ಈಕೆ ಯಾರೋ ಬೇರೆ ಅಂತೆ ಎಂದು ಸುಳ್ಳು ಹೇಳಿ, ನಾನು ಹುಣಸೂರಿಗೆ ಹೋಗಿದ್ದ ಸಮಯದಲ್ಲಿ ಅಕ್ಕನನ್ನು ಭೇಟಿ ಮಾಡಲು ಹೋದಳಂತೆ ಅಮ್ಮ.
ಎಷ್ಟಾದರೂ ಒಬ್ಬ ತಾಯಿಯ ಸಂಕಟ ಕೇಳಲು ಇನ್ನೊಂದು ತಾಯಿಯೇ ಹೋಗಬೇಕಲ್ಲವೇ? ನನ್ನಕ್ಕ ಈಗ ಸುಖವಾಗಿದ್ದಾಳೆ... ಅದಕ್ಕಿಂತ ಮಿಗಿಲಾಗಿ ಆಕೆ ಎಲ್ಲ ಮರೆತು, ಹೊಸ ವ್ಯಕ್ತಿತ್ವ ಪಡೆದಿದ್ದಾಳೆ...
ಕಾಲೇಜು ಓದಿ ,ಉನ್ನತ ಪದವಿಯನ್ನು ಯಾರೋ ಧರ್ಮಾತ್ಮರ ಸಹಾಯದಿಂದ ಪಡೆದ ಅಕ್ಕ ಊರಿನ ಬಡ ಮಕ್ಕಳ ವಿದ್ಯೆಗೆ ಸಹಾಯ ಮಾಡುತ್ತಾ
, ತನ್ನ ಜೀವನದ ಗುರಿಯನ್ನು ಕಂಡುಕೊಂಡಿದ್ದಾಳೆ..
ನನ್ನ ಪ್ರೀತಿಯ ಅಕ್ಕ..

ಕರ್ತವ್ಯ

ಪ್ರವೀಣನಿಗೆ ಮದುವೆಗಾಗಿ ಮನೆಯಲ್ಲಿ ಸಂಬಂಧ ಹುಡುಕುತ್ತಿದ್ದರು.
ಅವನು ಎಂ.ಎಸ್ ಮುಗಿಸಿಕೊಂಡು ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಮುನ್ನ ಮದುವೆ ಮಾಡಿಬಿಡುವ ಆತುರ ಸಾವಿತ್ರಮ್ಮನವರಿಗೆ.
ತಂದೆಯಿಲ್ಲದ, ಒಬ್ಬನೇ ಮಗನನ್ನು ಹತ್ತು ಮಾತು ಕೇಳಿಕೊಂಡೂ ಓದಿಸಿ,ಕೊಂಕು ಮಾಡಿದವರ ಮುಂದೆ ಬಿಂಕದಿಂದ ಹೆಮ್ಮೆಯಿಂದ ಜೀವನ ನಡೆಸುವಂತೆ ಮಾಡಿದ ಸಾವಿತ್ರಮ್ಮ, ಮಗನಿಗೆ ಮದುವೆ ಒಂದು ಮಾಡಿ ನೆಮ್ಮದಿಯಾಗಿ ಉಸಿರು ಬಿಡುವ ಪಣ ತೊಟ್ಟರು..
ಭದ್ರಾವತಿಯ ಮೂಲದವರಾದ ಸಾವಿತ್ರಮ್ಮ ಅವರ ತಮ್ಮ ಚಂದ್ರಶೇಖರನನ್ನು ಬರಹೇಳಿದ್ದು ಪ್ರವೀಣ್ ಮದುವೆ ವಿಚಾರಕ್ಕಾಗಿಯೇ. ಪ್ರವೀಣನಿಗೆ ಮದುವೆ,ಸಂಸಾರ ಅಂದರೆ ಆಗದು. "ಅಮ್ಮ,ಜೀವನದಲ್ಲಿ ಅದೇ ಗುರಿ ಅಲ್ಲಮ್ಮ " ಎನ್ನುತ್ತಿದ್ದ.
ಆದರೂ, ತಾಯಿ ತನ್ನ ಕರ್ತವ್ಯ ಮರೆಯುವಳೇ? ಅಂತೂ ತಮ್ಮ ಚಂದ್ರಶೇಖರನ ಕರೆಸಿ ಹೊಸಮನೆಯ ಒಂದು ಹುಡುಗಿಯ ಬಗ್ಗೆ ವಿಚಾರಿಸಿದ್ದಾಯಿತು. ಹುಡುಗಿಯು ಬಿ.ಎ ಓದಿದ್ದಾಳೆ.
ಹೊಸಮನೆ ಸರ್ಕಲ್ ಹತ್ತಿರದ ಸರಕಾರಿ ಲೈಬ್ರರಿಯಲ್ಲಿ ಕೆಲಸ,
ಒಳ್ಳೆಯ ಹುಡುಗಿ ..ಮನೆಯ ಕೆಲಸದಲ್ಲಂತೂ ತುಂಬಾ ಅಚ್ಚುಕಟ್ಟು .
ತಂದೆ ರೈಲ್ವೆ ಇಲಾಖೆಯಲ್ಲೆ ಕೆಲಸದಲ್ಲಿದ್ದಾರೆ .ತಾಯಿ ಇಲ್ಲದ ಮಗು. ಒಬ್ಬ ತಮ್ಮ ಇದ್ದಾನೆ..
ಪಾಪ. ಅನ್ನಿಸಿತು .. ತಾಯಿ ಇಲ್ಲದ ಹೆಣ್ಣು ಮಕ್ಕಳ ಕಷ್ಟ ಏನೆಂದು ಸ್ವತಃ ಆಕೆಗೆ ಗೊತ್ತಿದೆ..
ತಾಯಿಯನ್ನು ಚಿಕ್ಕ ವಯಸ್ಸಲ್ಲೇ ಕಳೆದುಕೊಂಡ ಸಾವಿತ್ರಮ್ಮನ ಕಣ್ಮುಂದೆ ಸಾವಿರ ನೆನಪು ಹಾದುಹೋದವು..
ಸ್ವಲ್ಪ ಕಣ್ಣಂಚಿನಲ್ಲಿದ್ದ ನೀರನ್ನು ಒರೆಸಿಕೊಂಡ ಸಾವಿತ್ರಮ್ಮ ಆ ಹುಡುಗಿಯನ್ನು ನೋಡಲು ಇದೇ ಮಂಗಳವಾರ ಹೋಗುವುದು ಎಂದು ಅದಕ್ಕಾಗಿ ಸಿದ್ಧತೆಯಲ್ಲಿ ತೊಡಗಿಕೊಂಡರು.
ಸಾವಿತ್ರಮ್ಮ ದೆಹಲಿಯಲ್ಲಿ ಕೆಲಸದ ಮೇಲೆ ಹೋಗಿದ್ದ ಪ್ರವೀಣನಿಗೆ ತಕ್ಷಣ ಹೊರಟು ಬರಲು ಹೇಳಿ ಪತ್ರ ಬರೆದರು.
ಇನ್ನು ತನ್ನ ಜವಾಬ್ದಾರಿಯೆಲ್ಲವೂ ಮುಗಿವುದು ಎಂದು ತಾಯಿಯು ಸಂತಸಪಟ್ಟಳು. ಮರುದಿನವೇ ಎಲ್ಲ ಸಂಭ್ರಮದಿಂದ ತಯಾರಿ ನಡೆದಿತ್ತು.
ಹುಡುಗಿಯ ತಂದೆ ಬಹಳ ಸಂತೋಷದಿಂದ ಅವರ ಬರುವಿಕೆಗಾಗಿ ಕಾದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಸಾವಿತ್ರಮ್ಮ ಗಣಪತಿ ಭಟ್ಟರಿಗೆ ಜಾತಕ ತೋರಿಸಿ, ಎಲ್ಲಾ ಸರಿಯಾಗಿದೆ ದೋಷಗಳೇನೂ ಇಲ್ಲವೆಂದು ತಿಳಿದು ಬಹಳ ಸಂತಸ ಪಟ್ಟರು. ಅಲ್ಲಿಯೇ ದೇವಸ್ಥಾನಕ್ಕೆ ಹೋಗಿ ಮಗನ ಹೆಸರು ಹೇಳಿ ಅರ್ಚನೆ ಮಾಡಿಸಿದರು.
ಮನೆಗೆ ಬಂದಾಗ ನಾಲ್ಕು ಘಂಟೆ ಸಾಯಂಕಾಲ..
ಅವರಿಗಾಗಿ ಬಾಗಿಲ ಬಳಿ ಪೋಸ್ಟಮನ್ ನಾಗರಾಜ ಕಾಯುತ್ತ ನಿಂತಿದ್ದ..
ಮಗನಿಂದ ಕಾಗದ ಬಂದಿತ್ತು..
ಮೊದಲು ಮಗನ ಪತ್ರ ಬಂದರೆ ಸಂತೋಷಪಡುತ್ತಿದ್ದ ಸಾವಿತ್ರಮ್ಮ ಇಂದು ಸ್ವಲ್ಪ ಹೆದರುತ್ತಲೆ ಕಾಗದ ಬಿಡಿಸಿ ಓದತೊಡಗಿದರು.
ಅಮ್ಮ,
ನಾನು ನಿನ್ನ ಪತ್ರ ಓದಿದೆ.
ನಿನಗೆ ಹೇಗೆ ಹೇಳುವುದೋ ತಿಳಿದಿಲ್ಲ.. ನಾನು ಇಲ್ಲಿ ಕೆಲಸ ಸಿಗದೇ ನಿನಗೆ ಪತ್ರ ಬರೆದ ಮರುದಿನವೇ ನನಗೊಬ್ಬರು ಪರಿಚಯವಾದರು. ಅವರ ಹೆಸರಾಂತ ಕಂಪನಿಯಲ್ಲಿಯೇ ನನಗೊಂದು ಕೆಲಸ ಕೊಟ್ಟ ಮಹಾನ್ ವ್ಯಕ್ತಿ ಅವರು.
ನನಗೆ ಕಷ್ಟ ಬಂದಾಗಲೆಲ್ಲ ತಂದೆಯ ರೀತಿ ನಿಂತು ಸಹಾಯ ಮಾಡಿದ್ದಾರೆ. ಅವರು ಈಗ ಹಾಸಿಗೆ ಹಿಡಿದಿದ್ದಾರೆ. ಅವರ ಒಬ್ಬಳೇ ಮಗಳು ಅನು. ಅವರ ಕಾಯಿಲೆ ವಾಸಿಯಾಗದೆಂದು, ಅನು ವನ್ನು ನಾನು ಮದುವೆಯಾಗಬೇಕೆಂದು ಅವರ ಆಸೆ.
ಅಮ್ಮ,
ನೀನೇ ಹೇಳಿದ್ದೆ, ಕಷ್ಟಕ್ಕೆ ಆದವರನ್ನು ಕೈಬಿಡಬಾರದೆಂದು. ನಾನು ನಿನ್ನ ಮಾತನ್ನು ಪಾಲಿಸುವುದು ನಿನಗೆ ಖುಷಿ ಅಲ್ಲವೇನಮ್ಮ?
ದಯವಿಟ್ಟು ನನ್ನ ಮದುವೆಗೆ ಬಂದು ನಮ್ಮನ್ನು ಆಶೀರ್ವದಿಸು..ಅನು ನಿನಗೆ ತಕ್ಕ ಸೊಸೆ ಅಮ್ಮ..
ಇಂತಿ,
ಪ್ರೀತಿಯ ಮಗ
ಪ್ರವೀಣ್
ಪತ್ರದ ಜೊತೆಗೇ ಕಾರ್ಡ್ ಒಂದು ಕಾಣಿಸಿತು...
ತಾಯಿ ಹೃದಯ ಹೆಮ್ಮೆ ಪಡಬೇಕೊ ಅಥವಾ ಅಳಬೇಕೋ ಅರಿಯದೆ ತಳಮಳಗೊಂಡಿತು ...
ತಾನು ಕರ್ತವ್ಯವನ್ನು ನಿಭಾಯಿಸಲಿಲ್ಲ ಅನ್ನುವ ಕೊರಗಿನಿಂದ ಆ ಜೀವ ನೊಂದು ಕಾಣದ ಊರಿಗೆ ಪಯಣ ಬೆಳೆಸಿತ್ತು.